
ಚಂಡೀಗಢ (ಜೂ. 03): ರಾಜ್ಯವನ್ನು ಬಾಧಿಸುತ್ತಿರುವ ಮಾದಕ ವ್ಯಸನದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬ ಜನಾಗ್ರಹಕ್ಕೆ ಮಣಿದಿರುವ ಪಂಜಾಬ್ ಸರ್ಕಾರ, ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡುವವರಿಗೆ ಮರಣದಂಡನೆ ವಿಧಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳುಹಿಸಲು ನಿರ್ಧರಿಸಿದೆ.
ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ನೇತೃತ್ವದಲ್ಲಿ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದ್ದು, ಸದ್ಯದಲ್ಲೇ ಕೇಂದ್ರ ಸರ್ಕಾರಕ್ಕೆ ರವಾನಿಸಲಾಗುತ್ತದೆ.
ಅಧಿಕಾರಕ್ಕೆ ಬಂದರೆ ಪಂಜಾಬ್ ಅನ್ನು ಮಾದಕ ವಸ್ತು ಮುಕ್ತಗೊಳಿಸುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಆದರೆ ಅಧಿಕಾರ ಸಿಕ್ಕಿ ಒಂದು ವರ್ಷವಾದರೂ ಸರ್ಕಾರ ನಿಷ್ಕಿ್ರಯವಾಗಿದೆ. ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿತ್ತು. ಈ ಸಂಬಂಧ ಹಾಲಿ ಪಂಜಾಬಿನಲ್ಲಿ ಜುಲೈ ಮೊದಲ (ಜು.1ರಿಂದ 7) ವಾರವನ್ನು ‘ಕರಾಳ ವಾರ’ ಆಚರಿಸಲಾಗುತ್ತಿದೆ. ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲೇ ಸರ್ಕಾರ ಸಂಪುಟ ಸಭೆ ನಡೆಸಿ ಮರಣದಂಡನೆಗೆ ಶಿಫಾರಸು ಮಾಡುವ ನಿರ್ಧಾರ ಕೈಗೊಂಡಿದೆ.
ಆದರೆ, ಕೇಂದ್ರ ಸರ್ಕಾರದ ನಾರ್ಕೋಟಿಕ್ ಡ್ರಗ್ಸ್ ಹಾಗೂ ನಶೆ ಬರಿಸುವ ವಸ್ತುಗಳ ಕಾಯ್ದೆಯಡಿ ಪದೇ ಪದೇ ಅಪರಾಧ ಎಸಗುವವರಿಗೆ ಮರಣದಂಡನೆ ವಿಧಿಸುವ ಪ್ರಸ್ತಾವ ಈಗಾಗಲೇ ಇದೆ. ಹೀಗಾಗಿ ಪಂಜಾಬ್ ಸರ್ಕಾರದ ನಡೆ ಕಣ್ಣೊರೆಸುವ ತಂತ್ರವಾಗಿರಬಹುದು ಎಂಬ ಮಾತುಗಳೂ ಇವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.