ಸೀರೆಯುಟ್ಟು 13 ಸಾವಿರ ಅಡಿ ಸ್ಕೈಡೈವ್ ಮಾಡಿದ ಪುಣೆ ಮಹಿಳೆ..!

By Suvarna Web DeskFirst Published Feb 13, 2018, 5:20 PM IST
Highlights

ಈಗಾಗಲೇ ಸ್ಕೈಡೈವಿಂಗ್‌'ನಲ್ಲಿ ಹಲವು ಸಾಧನೆ ಮಾಡಿರುವ ಪುಣೆಯ ಶೀತಲ್, ‘ಒಂಬತ್ತು ಗಜ ಸೀರೆ’ ಉಟ್ಟುಕೊಂಡು ಥಾಯ್ಲೆಂಡ್‌'ನ ಪಟ್ಟಾಯದಲ್ಲಿರುವ ಥಾಯ್ ಸ್ಕೈಡೈವ್ ಸೆಂಟರ್‌'ನಿಂದ ಭಾನುವಾರ 13,000 ಅಡಿ ಎತ್ತರದಿಂದ ಜಿಗಿದಿದ್ದಾರೆ.

ಮುಂಬೈ(ಫೆ.13): ಈಗಿನ ಮಹಿಳೆಯರು ಸೀರೆ ಉಟ್ಟುಕೊಂಡು ನಡೆಯೋದೇ ಕಷ್ಟ ಅಂತಾರೆ. ಅಂಥದ್ದರಲ್ಲಿ ಪದ್ಮಶ್ರೀ ಪುರಸ್ಕೃತೆ, ಪುಣೆ ಮೂಲದ ಶೀತಲ್ ರಾಣೆ ಮಹಾಜನ್ ಎಂಬ ಮಹಿಳೆ ‘ಕಚ್ಚೆ ಸೀರೆ’ ಉಟ್ಟುಕೊಂಡೇ ಸ್ಕೈಡೈವ್ ಮಾಡುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

ಈಗಾಗಲೇ ಸ್ಕೈಡೈವಿಂಗ್‌'ನಲ್ಲಿ ಹಲವು ಸಾಧನೆ ಮಾಡಿರುವ ಪುಣೆಯ ಶೀತಲ್, ‘ಒಂಬತ್ತು ಗಜ ಸೀರೆ’ ಉಟ್ಟುಕೊಂಡು ಥಾಯ್ಲೆಂಡ್‌'ನ ಪಟ್ಟಾಯದಲ್ಲಿರುವ ಥಾಯ್ ಸ್ಕೈಡೈವ್ ಸೆಂಟರ್‌'ನಿಂದ ಭಾನುವಾರ 13,000 ಅಡಿ ಎತ್ತರದಿಂದ ಜಿಗಿದಿದ್ದಾರೆ. 6 ಯಾರ್ಡ್ (5.4 ಮೀಟರ್) ಉದ್ದದ ಸಾಮಾನ್ಯ ಸೀರೆಗೆ ಹೋಲಿಸಿದರೆ 9 ಗಜ ಸೀರೆ, 9 ಯಾರ್ಡ್ (8.25 ಮೀಟರ್) ಉದ್ದವಾಗಿದೆ. ಹೀಗಾಗಿ ಈ ಸೀರೆಯನ್ನು ಉಟ್ಟು ಸ್ಕೈಡೈವ್ ಮಾಡುವುದು ಸವಾಲಿನ ಸಂಗತಿಯಾಗಿತ್ತು. ಅಂತಾರಾಷ್ಟ್ರೀಯ ಮಹಿಳಾ ದಿನಕ್ಕೆ ಈ ಸಾಹಸವನ್ನು ಅರ್ಪಿಸುತ್ತೇನೆ ಎಂದು ಎರಡು ಮಕ್ಕಳ ತಾಯಿಯಾಗಿರುವ ಶೀತಲ್ ಹೇಳಿದ್ದಾರೆ.

ಫೋನಿಕ್ಸ್ ಸ್ಕೈಡೈವಿಂಗ್ ಅಕಾಡೆಮಿಯನ್ನು ಸ್ಥಾಪಿಸಿರುವ ಶೀತಲ್, ದಕ್ಷಿಣ ಧ್ರುವ ಮತ್ತು ಉತ್ತರ ಧ್ರುವ ಸೇರಿದಂತೆ ವಿಶ್ವದ ವಿವಿಧ ಭಾಗಗಳಲ್ಲಿ ಸ್ಕೈಡೈವಿಂಗ್ ಸಾಹಸ ಪ್ರದರ್ಶಿಸಿದ್ದಾರೆ. ಇದುವರೆಗೆ ಸುಮಾರು 700 ಬಾರಿ ಸ್ಕೈಡೈವಿಂಗ್ ಮಾಡಿರುವ ಶೀತಲ್ ಮಹಾಜನ್ ಎರಡು ಡಜನ್‌'ಗೂ ಹೆಚ್ಚು ರಾಷ್ಟ್ರೀಯ ಮತ್ತು 6 ವಿಶ್ವ ದಾಖಲೆಗಳನ್ನು ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ.

click me!