ಪುಣೆ ಮ್ಯಾಚ್ ಫಿಕ್ಸ್? ಮಾರಾಟಕ್ಕಿವೆಯಾ ಕ್ರಿಕೆಟ್ ಪಿಚ್'ಗಳು? ಇಂಡಿಯಾ ಟುಡೇ ಸ್ಟಿಂಗ್ ಆಪರೇಷನ್

Published : Oct 25, 2017, 11:28 AM ISTUpdated : Apr 11, 2018, 01:02 PM IST
ಪುಣೆ ಮ್ಯಾಚ್ ಫಿಕ್ಸ್? ಮಾರಾಟಕ್ಕಿವೆಯಾ ಕ್ರಿಕೆಟ್ ಪಿಚ್'ಗಳು? ಇಂಡಿಯಾ ಟುಡೇ ಸ್ಟಿಂಗ್ ಆಪರೇಷನ್

ಸಾರಾಂಶ

* ಪುಣೆಯ ಪಿಚ್ ಕ್ಯುರೇಟರ್'ನ ಕರ್ಮಕಾಂಡ ಬಯಲು * ಇಂಡಿಯಾಟುಡೇ ಸುದ್ದಿ ವಾಹಿನಿಯ ಸ್ಟಿಂಗ್ ಆಪರೇಷನ್ * ಬುಕ್ಕಿಗಳ ವೇಷದಲ್ಲಿ ಕುಟುಕು ಕಾರ್ಯಾಚರಣೆ ನಡೆಸಿದ ಇಂಡಿಯಾಟುಡೇ ಪತ್ರಕರ್ತರು * ಪಿಚ್ ಬಗ್ಗೆ ಮಾಹಿತಿ ನೀಡಿದ ಕ್ಯುರೇಟರ್ ಸಲ್ಗಾಂವ್ಕರ್ * ಬುಕ್ಕಿಗಳು ಹೇಳಿದ ರೀತಿಯಲ್ಲಿ ಪಿಚ್'ನಲ್ಲಿ ಬದಲಾವಣೆ ಮಾಡಲು ಕ್ಯುರೇಟರ್ ಸಿದ್ಧ?

ಪುಣೆ(ಅ. 25): ಭಾರತೀಯ ಕ್ರಿಕೆಟ್'ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಪುಷ್ಟೀಕರಿಸುವ ಸುದ್ದಿಯೊಂದು ಬಂದಿದೆ. ಭಾರತದ ಕ್ರಿಕೆಟ್ ಪಿಚ್'ಗಳು ಮಾರಾಟದ ಸರಕಾಗಿರುವ ಆತಂಕಕಾಗಿ ವಿಚಾರವನ್ನು ರಾಷ್ಟ್ರೀಯ ಸುದ್ದಿ ವಾಹಿನಿಯೊಂದು ಬಹಿರಂಗಗೊಳಿಸಿದೆ. ಭಾರತ ಮತ್ತು ನ್ಯೂಜಿಲೆಂಡ್ ನಡುವೆ 2ನೇ ಏಕದಿನ ಪಂದ್ಯ ನಡೆಯಲಿರುವ ಪುಣೆಯಲ್ಲಿ ಪಿಚ್ ಕ್ಯುರೇಟರ್ ಪಾಂಡುರಂಗ್ ಸಲ್ಗಾಂವ್ಕರ್'ನ ಕರ್ಮಕಾಂಡವನ್ನು ಇಂಡಿಯಾಟುಡೇ ವಾಹಿನಿ ಸ್ಟಿಂಗ್ ಆಪರೇಷನ್ ಮಾಡಿ ಬಯಲಿಗೆ ತಂದಿದೆ. ದುಡ್ಡು ಕೊಡುತ್ತೇನೆನ್ನುವ ಯಾರೇ ಬಂದು ಹೇಳಿದರೂ ಪಿಚ್'ನಲ್ಲಿ ಬದಲಾವಣೆ ಮಾಡುತ್ತಾರಂತೆ ಆ ಆಸಾಮಿ. ಬುಕ್ಕಿಗಳಿಗೆ ಬೇಕಾದ ರೀತಿಯಲ್ಲಿ ಈತ ಪಿಚ್ ತಯಾರಿಸುತ್ತಾನೆನ್ನುವುದು ಈ ಸ್ಟಿಂಗ್ ಆಪರೇಷನ್'ನಿಂದ ತಿಳಿದುಬರುತ್ತದೆ.

ಹೇಗೆ ಸ್ಟಿಂಗ್ ಆಪರೇಷನ್?
ಇಂಡಿಯಾಟುಡೇ ವಾಹಿನಿಯ ವರದಿಗಾರರು ಬುಕ್ಕಿಗಳ ವೇಷದಲ್ಲಿ ಹೋಗಿ ಪುಣೆ ಪಿಚ್ ಕ್ಯುರೇಟರ್ ಸಲ್ಗಾಂವ್ಕರ್ ಅವರನ್ನು ಸಂಪರ್ಕಿಸುತ್ತಾರೆ. ಇಬ್ಬರು ಆಟಗಾರರಿಗೆ ಪಿಚ್'ನಲ್ಲಿ ಬೌನ್ಸ್ ಬಯಸುತ್ತಾರೆ. ತಾವು ಅದನ್ನು ಮಾಡಿಕೊಳ್ಳಬಲ್ಲಿರಾ ಎಂದು ಕೇಳಿಕೊಳ್ಳುತ್ತಾರೆ. ಅದಕ್ಕೆ ಪಾಂಡುರಂಗ್ ಸಲ್ಗಾಂವ್ಕರ್ ಒಪ್ಪಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ವಾಹಿನಿಯ ವರದಿಗಾರರು ಪಿಚ್'ನ್ನು ಪರಿಶೀಲಿಸಲೂ ಕ್ಯುರೇಟರ್ ಒಪ್ಪಿಕೊಳ್ಳುತ್ತಾರೆ. ಜೊತೆಗೆ, ಈಗಿರುವ ಪಿಚ್'ನ ವರ್ತನೆ ಬಗ್ಗೆಯೂ ಮಾಹಿತಿ ನೀಡುತ್ತಾರೆ. ಈ ಪಿಚ್'ನಲ್ಲಿ 337-340 ರನ್ ಗಳಿಸಲು ಸಾಧ್ಯ. 337 ರನ್ ಮೊತ್ತವನ್ನು ಚೇಸ್ ಕೂಡ ಮಾಡಬಲ್ಲಷ್ಟು ಬ್ಯಾಟಿಂಗ್ ವಿಕೆಟ್ ಇದಾಗಿದೆ ಎಂಬ ಮಾಹಿತಿಯನ್ನು ಕ್ಯುರೇಟರ್ ನೀಡುತ್ತಾರೆ. ಇದೆಲ್ಲವೂ ಸ್ಟಿಂಗ್ ಆಪರೇಷನ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇಂಡಿಯಾಟುಡೇ ವಾಹಿನಿ ಇದನ್ನು ಬಿತ್ತರಿಸಿದೆ.

ಕ್ರಿಕೆಟ್ ನಿಯಮಗಳೇನು?
* ಪಿಚ್ ಬಗ್ಗೆ ತೃತೀಯ ವ್ಯಕ್ತಿಗಳಿಗೆ ಯಾವುದೇ ಮಾಹಿತಿ ನೀಡಬಾರದು.
* ಪಂದ್ಯಕ್ಕೆ ಮುನ್ನ ಪಿಚ್ ಬಳಿ ಬಂದು ಪರಿಶೀಲಿಸಲು ಯಾರಿಗೂ ಅವಕಾಶ ಕೊಡಬಾರದು.

ಪಿಚ್ ಕ್ಯುರೇಟರ್ ಬ್ಯಾನ್:
ಪಿಚ್ ಕ್ಯುರೇಟರ್ ಬಗ್ಗೆ ಮಾಧ್ಯಮಗಳಲ್ಲಿ ಕುಟುಕು ಕಾರ್ಯಾಚರಣೆಯ ದೃಶ್ಯಗಳು ಪ್ರಸಾರವಾಗುತ್ತಿದ್ದಂತೆಯೇ ಬಿಸಿಸಿಐ ಎಚ್ಚೆತ್ತುಕೊಂಡಿದೆ. ಪಾಂಡುರಂಗ್ ಸಲ್ಗಾಂವ್ಕರ್ ಅವರನ್ನು ನಿಷೇಧಿಸಲು ಸಾಧ್ಯತೆ ಇದೆ. ಸದ್ಯ, ಆ ಕ್ಯುರೇಟರ್'ರನ್ನು ಮೈದಾನ ಪ್ರವೇಶಿಸದಂತೆ ನಿಷೇಧಿಸಲಾಗಿದೆ. ಒಂದು ವೇಳೆ, ಅವರ ವಿರುದ್ಧದ ಆರೋಪಗಳು ಸಾಬೀತಾದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬಿಸಿಸಿಐ ಹೇಳಿದೆ.

ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್'ನ ಪಿಚ್ ಕ್ಯುರೇಟರ್ ಆಗಿರುವ ಪಿ.ಸಲ್ಗಾಂವ್ಕರ್ ಈ ಹಿಂದೆಯೂ ಕೆಲ ವಿವಾದಗಳಿಗೆ ತುತ್ತಾಗಿದ್ದರು. ಇದೇ ಫೆಬ್ರವರಿಯಲ್ಲಿ ಪುಣೆಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಭಾರತವನ್ನು 333 ರನ್'ಗಳ ಬೃಹತ್ ಅಂತರದಿಂದ ಸೋಲಿಸಿತ್ತು. ಯದ್ವಾತದ್ವಾ ಟರ್ನ್ ಆಗುತ್ತಿದ್ದ ಆ ಪಿಚ್'ನಲ್ಲಿ ಭಾರತ ತನ್ನ 2 ಇನ್ನಿಂಗ್ಸಲ್ಲಿ ಕೇವಲ 105 ಮತ್ತು 107 ರನ್'ಗಳಿಗೆ ಆಲೌಟ್ ಆಗಿತ್ತು. ಆ ಪಿಚ್ ಬಗ್ಗೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಕ್ಯೂರೇಟರ್'ರನ್ನು ತರಾಟೆಗೆ ತೆಗೆದುಕೊಳ್ಳಲಾಗಿತ್ತು.

ಕ್ರಿಕೆಟ್ ಕ್ಷೇತ್ರದಲ್ಲಿ ಮ್ಯಾಚ್ ಫಿಕ್ಸಿಂಗ್, ಸ್ಪಾಟ್ ಫಿಕ್ಸಿಂಗ್ ಆರೋಪಗಳು ಮತ್ತು ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಇಂಡಿಯಾಟುಡೇ ಕುಟುಕು ಕಾರ್ಯಾಚರಣೆಯು ಕ್ರಿಕೆಟ್'ನ ವಾಸ್ತವ ಸ್ಥಿತಿಯನ್ನು ತೋರಿಸಿ ಎಚ್ಚರಿಸಿದೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 2ನೇ ಪಂದ್ಯವು ಇಂದು ಪುಣೆಯಲ್ಲಿ ನಡೆಯಲಿದೆ. ಮೊದಲನೇ ಪಂದ್ಯವನ್ನು ಸುಲಭವಾಗಿ ಬಿಟ್ಟುಕೊಟ್ಟಿರುವ ಭಾರತ ತಂಡಕ್ಕೆ ಈ ಎರಡನೇ ಪಂದ್ಯ ಬಹಳ ಮಹತ್ವದ್ದಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದಲ್ಲಿ ಕೈ ಮೀರಿದ ಕಳ್ಳರ ಹಾವಳಿ, ಕಾನೂನು ವ್ಯವಸ್ಥೆ ಸಂಪೂರ್ಣ ವಿಫಲ? ಪೊಲೀಸರ ಮನೆಗಳನ್ನೇ ಬಿಡುತ್ತಿಲ್ಲ ಖದೀಮರು!
ದೇಶ ವಿಭಜನೆ ಬಳಿಕ ಮೊದಲ ಬಾರಿಗೆ ಪಾಕಿಸ್ತಾನ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಕೋರ್ಸ್