
ಭದ್ರಾವತಿ(ನ.22): ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡುತ್ತಿದ್ದ ಯುವತಿಯೊಬ್ಬಳಿಗೆ ಸಂಚಾರಿ ಪೊಲೀಸರು ಏಕವಚನದಲ್ಲಿ ನಿಂದಿಸಿದ್ದಾರೆಂದು ಆರೋಪಿಸಿ ನಗರದ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದಲ್ಲಿ ದಿಢೀರ್ ಪ್ರತಿಭಟನೆ ನಡೆಸಲಾಯಿತು.
ಕಳೆದ 3 ದಿನಗಳಿಂದ ನಗರದ ಹಲವೆಡೆ ಸಂಚಾರಿ ಪೊಲೀಸರು ಹೆಲ್ಮೆಟ್ ತಪಾಸಣೆ ತೀವ್ರಗೊಳಿಸಿದ್ದು, ಬುಧವಾರ ಬೆಳಗ್ಗೆ 11 ಗಂಟೆ ಸಮಯದಲ್ಲಿ ಸಂಚಾರಿ ಪೊಲೀಸರು ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಯುವತಿಯನ್ನು ಏಕವಚನದಲ್ಲಿ ನಿಂದಿಸಿದ್ದಾರೆ. ಇದರಿಂದ ನೊಂದ ಯುವತಿ ಪೊಲೀಸರ ನಡೆದುಕೊಂಡ ರೀತಿಯನ್ನು ಪೋಷಕರಿಗೆ ವಿವರಿಸಿದ್ದಾಳೆ.
ಯುವತಿಯ ತಂದೆ ಕುವೆಂಪು ಪ್ರವಾಸಿ ವಾಹನ ಚಾಲಕ-ಮಾಲೀಕರ ಸಂಘದ ಅಧ್ಯಕ್ಷ ಡಿ. ರಾಜು ಮತ್ತು ತಾಯಿ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಸುಕನ್ಯಾ ತಮ್ಮ ಬೆಂಬಲಿಗರೊಂದಿಗೆ ಏಕಾಏಕಿ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಕೆಲ ಸಮಯ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಪ್ರತಿಭಟನೆ ತೀವ್ರಗೊಂಡ ಹಿನ್ನಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಉಪಾಧೀಕ್ಷಕ ಶಿವಕುಮಾರ್ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಅಂತ್ಯಗೊಂಡಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.