
ಬೆಂಗಳೂರು(ಮಾ.23): ಇತ್ತೀಚೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ಆಂಗ್ಲಭಾಷೆ ಮತ್ತು ಭೌತಶಾಸ್ತ್ರ ಪ್ರಶ್ನೆ ಪತ್ರಿಕೆಗಳಲ್ಲಿ ಕೇಳಲಾಗಿದ್ದ ತಪ್ಪು ಪ್ರಶ್ನೆಗಳಿಗೆ ಒಟ್ಟಾರೆ 9 ಕೃಪಾಂಕ ನೀಡಲು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಆಂಗ್ಲಭಾಷಾ ಪ್ರಶ್ನೆಪತ್ರಿಕೆಯಲ್ಲಿ ಒಂದು ಅಂಕದ ಮೂರು ಕಡ್ಡಾಯ ಪ್ರಶ್ನೆಗಳಿಗೆ ಮೂರು ಅಂಕ ಹಾಗೂ ಭೌತಶಾಸ್ತ್ರ ವಿಷಯದಲ್ಲಿ ಆರು ಕೃಪಾಂಕಗಳನ್ನು ನೀಡಲು ತಜ್ಞರ ಸಮಿತಿ ಶಿಫಾರಸು ಮಾಡಿದೆ. ಹಾಗಾಗಿ ಎಲ್ಲಾ ಮೌಲ್ಯಮಾಪಕರು ಈ ಬಾರಿಯ ಮೌಲ್ಯಮಾಪನದ ವೇಳೆ ಎಲ್ಲಾ ವಿಷಯಗಳ ಮೌಲ್ಯಮಾಪನವನ್ನು ಇಲಾಖೆ ಒದಗಿಸಿರುವ ಮಾದರಿ ಉತ್ತರದಂತೆ ಮಾಡಬೇಕು. ಕೃಪಾಂಕ ನೀಡುವಂತೆ ಇಲಾಖೆಯು ಸೂಚಿಸಿರುವ ವಿಷಯಗಳ ನಿಗದಿತ ಪ್ರಶ್ನೆಗಳಿಗೆ ಮಾತ್ರ ನೀಡಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ.ಶಿಖಾ ಇಲಾಖಾ ಪ್ರಕಟಣೆ ಮೂಲಕ ಸೂಚನೆ ನೀಡಿದ್ದಾರೆ.
ಇಂಗ್ಲಿಷ್ ಮತ್ತು ಭೌತಶಾಸ್ತ್ರ ಪ್ರಶ್ನೆ ಪತ್ರಿಕೆಗಳಲ್ಲಿ ಕೆಲ ಪ್ರಶ್ನೆಗಳನ್ನು ತಪ್ಪಾಗಿ ಕೇಳಲಾಗಿದೆ. ಸಾಕಷ್ಟು ವ್ಯಾಕರಣ ಮತ್ತು ಮುದ್ರಣ ದೋಷಗಳಿರುವುದರಿಂದ ಪ್ರಶ್ನೆ ಸಮರ್ಪಕವಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗದೆ ಸಮರ್ಪಕ ಉತ್ತರ ಬರೆಯಲು ಸಾಧ್ಯವಾಗಿಲ್ಲ. ಹಾಗಾಗಿ ಕೃಪಾಂಕ ನೀಡುವಂತೆ ಕೋರಿ ಅನೇಕ ವಿದ್ಯಾರ್ಥಿಗಳು ಆಯಾ ಪರೀಕ್ಷೆ ಮುಗಿದ ದಿನವೇ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಎಸ್‌ಎಂಎಸ್, ವಾಟ್ಸ್‌ಆ್ಯಪ್ ಮೂಲಕ ಮನವಿಗಳನ್ನು ಸಲ್ಲಿಸಿದ್ದರು.
ಅಲ್ಲದೆ, ಪರೀಕ್ಷೆ ನಂತರ ಇಲಾಖೆ ಪ್ರಶ್ನೆ ಪತ್ರಿಕೆಗಳ ಕುರಿತು ಕೇಳಿದ ಆಕ್ಷೇಪಣೆ ವೇಳೆಯೂ ಈ ಎರಡು ವಿಷಯಗಳಿಗೆ ಸಾರ್ವಜನಿಕರಿಂದ ಸಾಕಷ್ಟುದೂರುಗಳು ಬಂದಿದ್ದವು. ಹಾಗಾಗಿ ತಜ್ಞರ ಸಮಿತಿ ರಚಿಸಿದ್ದ ಇಲಾಖೆ ಆಕ್ಷೇಪ ಕೇಳಿಬಂದಿರುವ ಪ್ರಶ್ನೆಗಳಿಗೆ ಕೃಪಾಂಕ ನೀಡಬೇಕೇ ಬೇಡವೇ ಎಂಬ ವರದಿ ಪಡೆದಿತ್ತು.
ಕೃಪಾಂಕ ನೀಡಿರುವ ಪ್ರಶ್ನೆಗಳನ್ನು ಮೌಲ್ಯಮಾಪಕರಿಗೆ ನೀಡುವ ‘ಸ್ಕೀಂ ಆಫ್ ಇವ್ಯಾಲ್ಯುವೇಷನ್’ನಲ್ಲಿ ತಿಳಿಸಲಾಗುತ್ತದೆ. ಅಲ್ಲದೆ, ಸಾರ್ವಜನಿಕರಿಗೂ ತಿಳಿಸಲು ಪಿಯು ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಶ್ನೆಗಳನ್ನು ಅಪ್‌ಲೋಡ್ ಮಾಡಲು ನಿರ್ಧರಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.