ಕಾವೇರಿ: ಸುಪ್ರೀಂ ತೀರ್ಪಿನ ವಿರುದ್ಧ ಮೇಲ್ಮನವಿ ಇಲ್ಲ

By Suvarna Web DeskFirst Published Mar 23, 2018, 9:15 AM IST
Highlights

ಕಾವೇರಿ ವಿವಾದದ ಬಗ್ಗೆ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪಿಗೆ ಬದ್ಧವಾಗಿರುವುದು ಒಳಿತು ಎಂಬ ಕಾನೂನು ತಜ್ಞರ ಸಲಹೆಯಂತೆ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸದಿರಲು ರಾಜ್ಯ ಸರ್ಕಾರ ತೀರ್ಮಾ​ನಿ​ಸಿ​ದೆ.

 ಬೆಂಗಳೂರು (ಮಾ.23):  ಕಾವೇರಿ ವಿವಾದದ ಬಗ್ಗೆ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪಿಗೆ ಬದ್ಧವಾಗಿರುವುದು ಒಳಿತು ಎಂಬ ಕಾನೂನು ತಜ್ಞರ ಸಲಹೆಯಂತೆ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸದಿರಲು ರಾಜ್ಯ ಸರ್ಕಾರ ತೀರ್ಮಾ​ನಿ​ಸಿ​ದೆ.

ಕಾವೇರಿ ತೀರ್ಪಿನ ಹಿನ್ನೆ​ಲೆ​ಯಲ್ಲಿ ಮುಂದಿನ ತೀರ್ಮಾನ ಕೈಗೊ​ಳ್ಳಲು ಗುರು​ವಾರ ವಿಧಾ​ನ​ಸೌ​ಧ​ದಲ್ಲಿ ಆಯೋ​ಜಿ​ಸ​ಲಾ​ಗಿದ್ದ ಸಂಸ​ದರ ಸಭೆ​ಯಲ್ಲಿ ಮೂಡಿದ ಒಮ್ಮ​ತದ ತೀರ್ಮಾ​ನ​ವನ್ನು ಆಧ​ರಿಸಿ ರಾಜ್ಯ ಸರ್ಕಾರ ಈ ನಿಲುವು ತಳೆ​ದಿ​ದೆ.

ಇದೇ ವೇಳೆ ಕಾವೇರಿ ನಿರ್ವಹಣಾ ಮಂಡಳಿ ರಚಿಸಬಾರದು. ಅಗ​ತ್ಯ​ಬಿ​ದ್ದರೆ, ಸಂಕಷ್ಟಪರಿ​ಹಾರ ಸಮಿತಿ ರಚನೆ ಮಾಡು​ವಂತೆ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರುವ ಬಗ್ಗೆ ಸಭೆ​ಯಲ್ಲಿ ಒಮ್ಮತದ ತೀರ್ಮಾನ ತಗೆದುಕೊಳ್ಳಲಾಗಿದೆ.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್‌, ಕಾವೇರಿ ನದಿ ನೀರು ಹಂಚಿಕೆ ಬಗ್ಗೆ ರಾಜ್ಯ ಸರ್ಕಾರದ ಪರವಾಗಿ ವಾದಿಸುತ್ತಿರುವ ಹಿರಿಯ ವಕೀಲ ನಾರಿಮನ್‌ ಮತ್ತು ಕಾನೂನು ತಜ್ಞರ ತಂಡದ ಸಲಹೆಯನ್ನು ಸಭೆಯಲ್ಲಿ ಸಂಸದರ ಮುಂದಿಡಲಾಯಿತು. ನೀರು ಹಂಚಿಕೆ ಸಂಬಂಧ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪಿನಿಂದ ಕರ್ನಾಟಕಕ್ಕೆ ತಕ್ಕ ಮಟ್ಟಿಗೆ ಲಾಭ ಆಗಿದೆ. ಹೀಗಾಗಿ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸದಿರಲು ಕಾನೂನು ತಂಡ ಸಲಹೆ ನೀಡಿತ್ತು. ಕಾನೂನು ತಜ್ಞರ ಸಲಹೆ ಪಾಲಿಸಲು ಸಭೆಯಲ್ಲಿದ್ದ ಸಂಸದರು ಒಪ್ಪಿದ್ದಾರೆ. ಆದರಿಂದ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸುಪ್ರೀಂಕೋರ್ಟ್‌ ಕಾವೇರಿ ನಿರ್ವಹಣಾ ಮಂಡಳಿ ರಚಿಸುವುದನ್ನು ಕೇಂದ್ರ ಸರ್ಕಾರದ ವಿವೇಚನೆಗೆ ಬಿಟ್ಟಿದೆ. ಹೀಗಾಗಿ ಮುಂದಿನ ದಿನದಲ್ಲಿ ನಿರ್ವಹಣಾ ಮಂಡಳಿ ರಚಿಸುವುದು ಬೇಡ ಎಂದು ಕೇಂದ್ರಕ್ಕೆ ಒತ್ತಡ ಹೇರುವ ಬಗ್ಗೆ ಚರ್ಚಿಸಲಾಗಿದೆ. ಈಗಾಗಲೇ ನಿರ್ವಹಣಾ ಮಂಡಳಿ ರಚಿಸುವ ಬಗ್ಗೆ ನಮ್ಮ ನಿಲುವನ್ನು ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರು ಕೇಂದ್ರ ನೀರಾವರಿ ಕಾರ್ಯದರ್ಶಿಗಳಿಗೆ ತಿಳಿಸಿದ್ದಾರೆ. ನಿರ್ವಹಣಾ ಮಂಡಳಿ ಬದಲಿಗೆ, ಸಂಕಷ್ಟಪರಿಹಾರ ಸಮಿತಿ ರಚಿಸುವ ಬಗ್ಗೆ ರಾಜ್ಯ ಸರ್ಕಾರ ಒಲವು ಹೊಂದಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ ಎಂದು ಹೇಳಿದರು.

ಕಾವೇರಿ ನೀರು ಹಂಚಿಕೆ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ಫೆ.16ರಂದು ತೀರ್ಪು ನೀಡಿತ್ತು. ತಮಿಳುನಾಡು ಹಾಗೂ ರಾಜ್ಯದ ನಡುವೆ ಕಾವೇರಿ ನೀರು ಹಂಚಿಕೆ ಬಗ್ಗೆ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪಿನಲ್ಲಿ ತಮಿಳುನಾಡಿಗೆ 192 ಟಿಎಂಸಿ ಬದಲಿಗೆ 177.25 ಟಿಎಂಸಿ ನೀರು ಬಿಡಲು ಆದೇಶ ಮಾಡಿದೆ. ಇದರಿಂದ 14.75 ಟಿಎಂಸಿ ನೀರು ರಾಜ್ಯಕ್ಕೆ ಉಳಿಕೆಯಾಗಲಿದ್ದು, 4.75 ಟಿಎಂಸಿ ನೀರನ್ನು ಬೆಂಗಳೂರಿಗೆ ಕುಡಿಯುವ ಉದ್ದೇಶಕ್ಕೆ ಬಳಸಿಕೊಳ್ಳಲು ಕೋರ್ಟ್‌ ಆದೇಶ ನೀಡಿದೆ. ಈ ಸುಪ್ರೀಂಕೋರ್ಟ್‌ ಆದೇಶಕ್ಕೆ ಸುಮ್ಮನಾಗಬೇಕೇ ಅಥವಾ ಪುನರ್‌ ಪರಿಶೀಲನೆ ಅರ್ಜಿ ಸಲ್ಲಿಸಬೇಕೇ ಎಂಬ ಬಗ್ಗೆ ಸ​ಭೆ​ಯಲ್ಲಿ ಚರ್ಚೆ ನಡೆಯಿತು. ಈ ವೇಳೆ ಸದಸ್ಯರೆಲ್ಲರೂ ಮೇಲ್ಮನವಿ ಸಲ್ಲಿಸಬಾರದು ಎಂಬ ಕಾನೂನು ತಜ್ಞರ ಸಲಹೆಗೆ ಮಣೆ ಹಾಕಿದರು.

click me!