3 ವರ್ಷದಲ್ಲಿ ಜನರ ಸಿಟ್ಟಿಗೆ 244 ಬಸ್ ಜಖಂ!: ನೆನಪಿರಲಿ ಇದು ನಿಮ್ಮದೇ ಆಸ್ತಿ!

By Web DeskFirst Published Sep 16, 2019, 8:07 AM IST
Highlights

3 ವರ್ಷದಲ್ಲಿ ಪ್ರತಿಭಟನೆ ಸಿಟ್ಟಿಗೆ 244 ಬಸ್‌ ಜಖಂ| 5 ಬಸ್‌ಗಳಿಗೆ ಬೆಂಕಿ| ಕೆಎಸ್‌ಆರ್‌ಟಿಸಿಗೆ ಒಟ್ಟು 21 ಕೋಟಿ ರು. ನಷ್ಟ

ಬೆಂಗಳೂರು[ಸೆ.16]: ಕಳೆದ ಮೂರೂವರೆ ವರ್ಷದಲ್ಲಿ ರಾಜ್ಯದಲ್ಲಿ ನಡೆದ ಪ್ರತಿಭಟನೆ, ಬಂದ್‌ ವೇಳೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) 244 ಬಸ್‌ಗಳಿಗೆ ಹಾನಿಯಾಗಿದ್ದರೆ, ಐದು ಬಸ್‌ಗಳು ಬೆಂಕಿಗಾಹುತಿಯಾಗಿವೆ. ಬಸ್‌ಗಳ ಹಾನಿ ಹಾಗೂ ಸಾರಿಗೆ ಆದಾಯ ಖೋತಾ ಸೇರಿ ನಿಗಮಕ್ಕೆ 21 ಕೋಟಿ ರು. ನಷ್ಟವಾಗಿದೆ.

ರಾಜ್ಯದಲ್ಲಿ ಈ ಅವಧಿಯಲ್ಲಿ ವಿವಿಧ ಕಾರಣಗಳಿಗೆ ಹಲವಾರು ಬಾರಿ ಪ್ರತಿಭಟನೆ, ಬಂದ್‌ ಆಚರಿಸಲಾಗಿದೆ. ಈ ಸಮಯದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪ್ರತಿಭಟನಾಕಾರರ ಆಕ್ರೋಶದ ಕಿಚ್ಚಿಗೆ ಕೆಎಸ್‌ಆರ್‌ಟಿಸಿಯ 244 ಬಸ್‌ಗಳು ಜಖಂಗೊಂಡಿವೆ. ಐದು ಬಸ್‌ಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. 2016-17ನೇ ಸಾಲಿನಲ್ಲಿ 171 ಬಸ್‌ಗಳಿಗೆ ಹಾನಿಯಾಗಿದ್ದರೆ, 4 ಬಸ್‌ಗಳು ಬೆಂಕಿಗಾಹುತಿಯಾಗಿವೆ. 2017-18ನೇ ಸಾಲಿನಲ್ಲಿ 16 ಬಸ್‌ಗಳು, 2018-19ನೇ ಸಾಲಿನಲ್ಲಿ 34 ಹಾಗೂ 2019-20ನೇ ಸಾಲಿನಲ್ಲಿ ಏಪ್ರಿಲ್‌ನಿಂದ ಸೆಪ್ಟೆಂಬರ್‌ ವರೆಗೆ 23 ಬಸ್‌ಗಳಿಗೆ ಹಾನಿಯಾಗಿದ್ದು, ಒಂದು ಬಸ್‌ ಸಂಪೂರ್ಣ ಸುಟ್ಟಿದೆ.

ನಾನು ನಿಮ್ಮ ಆಸ್ತಿ - ಹಾಳು ಮಾಡದಿರಿ : KSRTC ಬಸ್ ಮನವಿ

ಸಾಮಾನ್ಯವಾಗಿ ಬಂದ್‌ ಆಚರಣೆ ಸಂದರ್ಭದಲ್ಲಿ ಪರಿಸ್ಥಿತಿ ಅವಲೋಕಿಸಿ ಬಸ್‌ಗಳ ಕಾರ್ಯಾಚರಣೆ ಮಾಡಲಾಗುತ್ತದೆ. ಒಂದು ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿದರೆ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಬಸ್‌ಗಳ ಕಾರ್ಯಾಚರಣೆ ಸ್ಥಗಿತಗೊಳಿಸಲಾಗುತ್ತದೆ.

ಪ್ರತಿಭಟನೆಗಳ ಸಮಯದಲ್ಲಿ ಬಸ್‌ ಕಾರ್ಯಾಚರಣೆ ಪೂರ್ಣ ಸ್ಥಗಿತಗೊಳಿಸದಿದ್ದರೂ ಪ್ರತಿಭಟನಾ ಪ್ರದೇಶಗಳಲ್ಲಿ ಅನಿವಾರ್ಯವಾಗಿ ಬಸ್‌ ಸಂಚಾರ ಸ್ಥಗಿತಗೊಳಿಸಲಾಗುತ್ತದೆ. ಇದರಿಂದ ಕಳೆದ ಮೂರು ವರ್ಷದಲ್ಲಿ 20 ಕೋಟಿ ರು. ಸಾರಿಗೆ ಆದಾಯ ಖೋತಾ ಆಗಿದೆ. ಈ ಪೈಕಿ 2018-19ನೇ ಸಾಲಿನಲ್ಲಿ ಅತಿ ಹೆಚ್ಚು ಅಂದರೆ 13.16 ಕೋಟಿ ರು. ಸಾರಿಗೆ ಆದಾಯ ನಷ್ಟವಾಗಿದೆ ಎಂದು ಕೆಎಸ್‌ಆರ್‌ಟಿಸಿಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಪ್ರತಿಭಟನೆ ಅಥವಾ ಬಂದ್‌ ವೇಳೆ ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿ ಮಾಡುವುದು ಸರಿಯಲ್ಲ. ವಾಹನಗಳಿಗೆ ಬೆಂಕಿ ಹಾಕುವುದು, ಕಲ್ಲು ತೂರಾಟ ಮಾಡುವುದರಿಂದ ಏನೂ ಸಿಗುವುದಿಲ್ಲ. ಇಂತಹ ಘಟನೆಗಳಿಂದ ನಾಗರಿಕರಿಗೆ ಸಮಸ್ಯೆಯಾಗುತ್ತದೆ. ಸಾರಿಗೆ ನಿಗಮಗಳಿಗೆ ನಷ್ಟವಾಗುತ್ತದೆ. ಹಾಗೆಂದು ಪ್ರತಿಭಟನೆ ಅಥವಾ ಬಂದ್‌ ಮಾಡಲೇಬಾರದು ಎಂದು ಹೇಳಲಾಗದು. ಸಾರ್ವಜನಿಕ ಆಸ್ತಿ-ಪಾಸ್ತಿ, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಶಾಂತಿಯುತವಾಗಿ ಹೋರಾಟ ಮಾಡಬೇಕು ಎಂದು ಹೇಳಿದರು.

click me!