
ಬೆಂಗಳೂರು(ಆ.01): ಮಾತೆ ಮಹಾದೇವಿ ಮತ್ತು ರಂಭಾಪುರಿ ಶ್ರೀಗಳ ವಿರುದ್ಧ ರಾಜ್ಯದ ವಿವಿಧೆಡೆ ಪ್ರತಿಭಟನೆಗಳು ನಡೆದಿವೆ.
ಲಿಂಗಾಯತರಿಗೆ ಪ್ರತ್ಯೇಕ ಧರ್ಮ ನೀಡುವ ಕುರಿತಂತೆ ನಡೆಯುತ್ತಿರುವ ಚರ್ಚೆಯಲ್ಲಿ ಮಾತೆ ಮಹಾದೇವಿ ಅವರು ರಂಭಾಪುರಿ ಸ್ವಾಮೀಜಿಗಳ ತೇಜೋವಧೆ ಮಾಡಿದ್ದಾರೆ ಎಂದು ಆರೋಪಿಸಿ ಅಖಿಲ ಭಾರತ ವೀರಶೈವ ಲಿಂಗಾಯಿತ ಯುವ ಸಭಾ ವತಿಯಿಂದ ರಾಜ್ಯ ರಾಜಧಾನಿ ಬೆಂಗಳೂರಿನ ಪುರಭವನದ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು. ಕೊಳದ ಮಠದ ಶಾಂತವೀರ ಸ್ವಾಮೀಜಿ, ವಿಭೂತಿ ಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಸಿದ್ಧರ ಬೆಟ್ಟದ ವೀರಭದ್ರ ಸ್ವಾಮೀಜಿ, ರಾಜಾಪುರ ಮಠದ ಸ್ವಾಮೀಜಿ, ಮೈಸೂರು ಜಿಲ್ಲೆಯ ದನಗುರು ಶ್ರೀಗಳು, ರಾಮನಗರದ ರೇವಣ್ಣ ಸಿದ್ಧೇಶ್ವರ ಶಿವಾಚಾರ್ಯರು, ಕೋಲಾರದ ತೇಜೇಶ ಲಿಂಗ ಶಿವಾಚಾರ್ಯರು ಸೇರಿದಂತೆ ಹಲವು ಮಠಾಧೀಶರು ಹಾಗೂ ಸಮುದಾಯದ ಮುಖಂಡರು ಭಾಗವಹಿಸಿದ್ದರು.
ಹುಬ್ಬಳಿಯಲ್ಲಿ ಮಾತೆ ಮಹಾದೇವಿ ವಿರುದ್ಧ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ಇದೇ ವೇಳೆ ಮಾತೆ ಮಹಾದೇವಿ ಭಾವಚಿತ್ರವನ್ನು ದಂಡುಪಾಳ್ಯ ಚಿತ್ರದ ನಟಿ ಪೂಜಾ ಗಾಂಧಿಯ ಚಿತ್ರಕ್ಕೆ ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದರು. ಹಾವೇರಿ ಜಿಲ್ಲೆಯ ಗುತ್ತಲ ಪಟ್ಟಣದಲ್ಲಿ ಮಾತೆ ಮಹಾದೇವಿ ಹೇಳಿಕೆಗಳನ್ನು ಖಂಡಿಸಿ ಬಸವೇಶ್ವರ ಮೂರ್ತಿಯ ಮುಂದೆ ಪ್ರತಿಭಟನೆ ನಡೆಸಲಾಯಿತು. ನೆಗಳೂರು ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯರು ಇದ್ದರು.
ಮಾತೆ ಮಹಾದೇವಿ ಅವರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿರುವ ರಂಭಾಪುರಿ ಶ್ರೀಗಳು ಭೇಷರತ್ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿ ರಾಷ್ಟ್ರೀಯ ಬಸವದಳದ ಕಾರ್ಯಕರ್ತರು ಮಂಗಳವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.