
ಬೆಂಗಳೂರು (ಆ.01): ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆಗೆ ಸಂಬಂಧಿಸಿದಂತೆ ರಾಜ್ಯಾದಂತ್ಯ ಪರ-ವಿರೋಧ ಚರ್ಚೆಗಳು ಮಂಗಳವಾರವೂ ಮುಂದುವರಿದಿವೆ. ಕೊಪ್ಪಳ ಮತ್ತು ಯಾದಗಿರಿಗಳಲ್ಲಿ ಸಮುದಾಯದ ವಿವಿಧ ಮಠಾಧೀಶರು ಪ್ರತ್ಯೇಕವಾಗಿ ಸಭೆ ನಡೆಸಿ ಒಗ್ಗಟ್ಟಿನಿಂದ ಹೋರಾಟ ರೂಪಿಸಲು ನಿರ್ಧಾರ ಮಾಡಿದ್ದಾರೆ.
ಕೊಪ್ಪಳದಲ್ಲಿ ಗುರುಪೀಠ ಮತ್ತು ವಿರಕ್ತಮಠದ 15 ಕ್ಕೂ ಅಧಿಕ ಶ್ರೀಗಳು ಮುಂಡರಗಿಯ ಶ್ರೀ ಅನ್ನದಾನೀಶ್ವರ ಮಹಾ ಸ್ವಾಮೀಜಿಗಳ ನೇತೃತ್ವದಲ್ಲಿ ಸಭೆ ನಡೆಸಿ, ವೀರಶೈವ ಮತ್ತು ಲಿಂಗಾಯತ ಪದದ ಅರ್ಥ ಬೇರೆ ಬೇರೆ ಅಲ್ಲ. ಅವುಗಳ ನಡುವೆ ಭೇದ ಹುಟ್ಟುಹಾಕುವುದು ಬೇಡ. ಇನ್ನು ಈಗಾಗಲೇ ವೀರಶೈವ- ಲಿಂಗಾಯತರು ಒಂದೇ ಆಗಿರುವುದರಿಂದ ಲಿಂಗಾಯತ ಸ್ವತಂತ್ರ ಧರ್ಮ ಕಲ್ಪನೆ ಅಪ್ರಸ್ತುತ ಎಂಬ ನಿರ್ಣಯ ಕೈಗೊಂಡಿದ್ದಾರೆ.
ಯಾದಗಿರಿಯ ಸಗರ ನಾಡು ಮಠಾಧೀಶರ ಒಕ್ಕೂಟದ ಗೌರವಾಧ್ಯಕ್ಷ ಮತ್ತು ಅಬ್ಬೆತುಮುಕೂರು ಸಿದ್ದಸಂಸ್ಥಾನ ಮಠದ ಪೀಠಾಧಿಪತಿ ಡಾ. ಗಂಗಾಧರ ಸ್ವಾಮೀಜಿಯೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಲಿಂಗಾಯತ ಮತ್ತು ವೀರಶೈವ ಒಂದೇ ಸಮುದಾಯದ ಎರಡು ಹೆಸರುಗಳಾಗಿವೆ. ರಾಜಕೀಯ ಮತ್ತು ವೈಯಕ್ತಿಕ ಲಾಭಕ್ಕಾಗಿ ಇದನ್ನು ಒಡೆಯಬೇಡಿ. ಒಂದು ವೇಳೆ ಪ್ರತ್ಯೇಕ ಧರ್ಮ ಮಾಡುವುದಾದರೆ ‘ವೀರಶೈವ ಲಿಂಗಾಯತ ಧರ್ಮ’ ಮಾಡಿದರೆ ಅಭ್ಯಂತರವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪಂಚಮಸಾಲಿ ಸಮಾಜ ಬೆಂಬಲ:
ಸ್ವತಂತ್ರ ಧರ್ಮ ಬೇಡಿಕೆಯನ್ನು ವೀರಶೈವ ಲಿಂಗಾಯಿತ ಪಂಚಮಸಾಲಿ ಸಮಾಜ ಬೆಂಬಲಿಸಿದ್ದು, ವಿವಾದಕ್ಕೆ ಪರಿಹಾರ ಕಂಡುಕೊಳ್ಳಲು ಆ. 2 ರಂದು ಬೆಂಗಳೂರಿನಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಕರೆದಿರುವ ಸಭೆಯಲ್ಲಿ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧರಾಗಿರುವುದಾಗಿ ಹೇಳಿದೆ. ವೀರಶೈವ ಲಿಂಗಾಯತ ಸ್ವತಂತ್ರ ಧರ್ಮವೆಂದು ಮಾನ್ಯತೆ ಪಡೆಯಲೇಬೇಕು. ವೀರಶೈವ ಲಿಂಗಾಯತದ ಎಲ್ಲಾ ಧರ್ಮಗುರುಗಳು ವೈಯಕ್ತಿಕ ಪ್ರತಿಷ್ಠೆ ಬದಿಗಿಟ್ಟು ಹೋರಾಡಿದರೆ ಜಯ ನಿಶ್ಚಿತ ಎಂದು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.