ನಿಮ್ಮ ಮೊಬೈಲ್ ಹ್ಯಾಕ್ ಆಗಿರುವ ಶಂಕೆ ಇದೆ ಎಂದು ವಾಟ್ಸ್‌ಆ್ಯಪ್ ಕಂಪನಿಯಿಂದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೂ ಸಂದೇಶ ಬಂದಿತ್ತು’ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.
ನವದೆಹಲಿ [ನ.04]: ಪ್ರಸಿದ್ಧ ಮೊಬೈಲ್ ಸಾಮಾಜಿಕ ಮಾಧ್ಯಮವಾದ ವಾಟ್ಸ್‌ಆ್ಯಪ್ ಬಳಸಿಕೊಂಡು ದೇಶದಲ್ಲಿನ ಪತ್ರಕರ್ತರು ಹಾಗೂ ಮಾನವ ಹಕ್ಕು ಹೋರಾಟಗಾರರ ಬೇಹುಗಾರಿಕೆ ನಡೆಸಲಾಗಿದೆ ಎಂಬ ವಿವಾದದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷ ಸ್ಫೋಟಕ ಆರೋಪ ಮಾಡಿದೆ. ‘ನಿಮ್ಮ ಮೊಬೈಲ್ ಹ್ಯಾಕ್ ಆಗಿರುವ ಶಂಕೆ ಇದೆ ಎಂದು ವಾಟ್ಸ್‌ಆ್ಯಪ್ ಕಂಪನಿಯಿಂದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೂ ಸಂದೇಶ ಬಂದಿತ್ತು’ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.
ಪಕ್ಷದ ವಕ್ತಾರ ರಣದೀಪ್ ಸುರ್ಜೇವಾಲಾ ಅವರು ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿ, ‘ಫೋನ್ ಹ್ಯಾಕ್ ಆಗಿರಬಹುದು ಎಂದು ವಿವಿಧ ವ್ಯಕ್ತಿಗಳಿಗೆ ವಾಟ್ಸ್‌ಆ್ಯಪ್ ಈ ಹಿಂದೆಯೇ ಸಂದೇಶ ರವಾನಿಸಿತ್ತು. ಅಂತಹ ಒಂದು ಸಂದೇಶ ಪ್ರಿಯಾಂಕಾ ಅವರಿಗೂ ವಾಟ್ಸಪ್‌ನಿಂದ ಬಂದಿತ್ತು’ ಎಂದು ಹೇಳಿದರು. ‘ಆದರೆ ಈ ಪ್ರಕರಣಗಳ ಬಗ್ಗೆ ಭಾರತ ಸರ್ಕಾರ ಮೌನ ವಹಿಸಿದೆ ಏಕೆ? ದೇಶದ ಜನರಿಗೆ ಖಾಸಗಿತನದ ಹಕ್ಕು ಇಲ್ಲವೇ?’ ಎಂದು ಅವರು ಪ್ರಶ್ನಿಸಿದರು.
undefined
ಆದರೆ, ಮೂಲಗಳು ಹೇಳುವ ಪ್ರಕಾರ, ‘ವಾಟ್ಸ್‌ಆ್ಯಪ್‌ನಿಂದ ಈ ಸಂದೇಶ ಬಂದ ನಂತರ ಪ್ರಿಯಾಂಕಾ ಅವರು ಅದನ್ನು ನಿರ್ಲಕ್ಷಿಸಿದ್ದರು. ಸಂದೇಶವನ್ನು ಡಿಲೀಟ್ ಮಾಡಿದ್ದರು.’
ರಾಜಕಾರಣಿಗಳ ಫೋನ್ ಸುರಕ್ಷಿತ: ವಾಟ್ಸ್‌ಆ್ಯಪ್
‘ಪ್ರಿಯಾಂಕಾ ಅವರ ಮೊಬೈಲ್ ಹ್ಯಾಕ್ ಆಗಿರುವ ಸಾಧ್ಯತೆ ಇದೆ’ ಎಂದು ಕಾಂಗ್ರೆಸ್ ಹೇಳಿದ ಬೆನ್ನಲ್ಲೇ ವಾಟ್ಸ್‌ಆ್ಯಪ್ ಮೂಲಗಳು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿವೆ. ‘ಯಾವುದೇ ರಾಜಕಾರಣಿಗಳ ಫೋನ್ ಹ್ಯಾಕ್ ಆಗಿಲ್ಲ’ ಎಂದು ವಾಟ್ಸ್‌ಆ್ಯಪ್ ಮೂಲಗಳು ಹೇಳಿವೆ ಎಂದು ಟೀವಿ ಚಾನೆಲ್ ಒಂದು ವರದಿ ಮಾಡಿದೆ.
121 ಭಾರತೀಯರ ಮೊಬೈಲ್ ಹ್ಯಾಕ್: ಸೆಪ್ಟೆಂಬರಲ್ಲೇ ಸಂದೇಶ
ಈ ನಡುವೆ, ತನ್ನ ಬಳಕೆದಾರರ ಮೊಬೈಲ್‌ಗಳು ಹ್ಯಾಕ್ ಆಗಿವೆ ಎಂಬ ಬಗ್ಗೆ ಸೆಪ್ಟೆಂಬರ್‌ನಲ್ಲೂ ಭಾರತ ಸರ್ಕಾರಕ್ಕೆ ಮಾಹಿತಿ ನೀಡಲಾಗಿತ್ತು ಎಂದು ವಾಟ್ಸ್‌ಆ್ಯಪ್ ಮೂಲಗಳು ಹೇಳಿವೆ.
‘121 ಭಾರತೀಯ ಬಳಕೆದಾರರ ಮೊಬೈಲ್‌ಗಳನ್ನು ಇಸ್ರೇಲಿ ಬೇಹುಗಾರಿಕಾ ತಂತ್ರಾಂಶವಾದ ಪೆಗಾಸಸ್ ಮೂಲಕ ಹ್ಯಾಕ್ ಮಾಡಲಾಗಿದೆ’ ಎಂಬುದೇ ಆ ಮಾಹಿತಿ ಆಗಿತ್ತು ಎಂದು ಗೊತ್ತಾಗಿದೆ. ಆದರೆ ಭಾರತದ ಮಾಹಿತಿ ತಂತ್ರಜ್ಞಾನ ಇಲಾಖೆಯು ‘ಆ ಮಾಹಿತಿ ಅಸಮರ್ಪಕವಾಗಿತ್ತು ಹಾಗೂ ಅಪೂರ್ಣವಾಗಿತ್ತು’ ಎಂದು ಸ್ಪಷ್ಟಪಡಿಸಿದೆ. ಮೇ ತಿಂಗಳಲ್ಲಿ ಕೂಡ ಇಂಥದ್ದೇ ಮಾಹಿತಿಯನ್ನು ಸರ್ಕಾರಕ್ಕೆ ವಾಟ್ಸ್‌ಆ್ಯಪ್ ನೀಡಿತ್ತು ಎಂದು ಭಾನುವಾರ ವರದಿಯಾಗಿತ್ತು.
ಸಂಸದೀಯ ಸಮಿತಿಗಳಿಂದ ಪರಿಶೀಲನೆ
ಗಣ್ಯರು, ಪತ್ರಕರ್ತರು ಹಾಗೂ ಸಾಮಾಜಿಕ ಹೋರಾಟಗಾರರ ಮೇಲೆ ವಾಟ್ಸ್‌ಆ್ಯಪ್ ಬಳಸಿ ಬೇಹುಗಾರಿಕೆ ನಡೆಸಲಾಗಿದೆ ಎಂಬ ವರದಿಗಳ ಬೆನ್ನಲ್ಲೇ ಕಾಂಗ್ರೆಸ್ ಸಂಸದರು ಅಧ್ಯಕ್ಷರಾಗಿರುವ ಎರಡು ಸಂಸದೀಯ ಸ್ಥಾಯಿ ಸಮಿತಿಗಳು, ಈ ವಿಷಯವನ್ನು ಪರಿಶೀಲನೆಗೆ ಒಳಪಡಿಸಲು ತೀರ್ಮಾನಿಸಿವೆ. ‘ನ.15ರಂದು ಸಭೆ ನಡೆಸಿ ನಾವು ಪರಿಶೀಲನೆ ನಡೆಸಲಿದ್ದೇವೆ’ ಎಂದು ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ ಅಧ್ಯಕ್ಷ ಆನಂದ ಶರ್ಮಾ ಹೇಳಿದ್ದಾರೆ. ‘ಇದು ಕಳವಳಕಾರಿ ಸಂಗತಿ. ಈ ಬಗ್ಗೆ ನಾವು ಚರ್ಚಿಸುತ್ತೇವೆ’ ಎಂದು ಮಾಹಿತಿ ತಂತ್ರಜ್ಞಾನ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿ ತರೂರ್ ತಿಳಿಸಿದ್ದಾರೆ.
ತಮ್ಮ ಫೋನ್ ಕೂಡ ಹ್ಯಾಕ್ ಆಗಿತ್ತು ಎಂದು ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಎನ್‌ಸಿಪಿ ಮುಖಂಡ ಪ್ರಫುಲ್ ಪಟೇಲ್ ಇತ್ತೀಚೆಗೆ ಆರೋಪಿಸಿದ್ದರು.