
ಬೆಂಗಳೂರು : ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ)ದ ಕನಸಿನ ‘ಪ್ರಿಯದರ್ಶಿನಿ ಬಸ್ ಪಾಸ್’ ಮತ್ತು ‘ಇಂದಿರಾ ಸಾರಿಗೆ’ ಯೋಜನೆಗಳಿಗೆ ಚುನಾವಣಾ ನೀತಿ ಸಂಹಿತೆ ಭಾರಿ ಹೊಡೆತ ನೀಡಿದೆ. ಯೋಜನೆ ಅನುಷ್ಠಾನ ಸಕಲ ಸಿದ್ಧತೆ ನಡೆಸಿದ್ದ ಬಿಎಂಟಿಸಿಗೆ ಅಂತಿಮ ಕ್ಷಣದಲ್ಲಿ ಭಾರಿ ನಿರಾಸೆಯಾಗಿದೆ.
ನಗರದಲ್ಲಿರುವ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಬಿಎಂಟಿಸಿ ಮಾಸಿಕ ಪಾಸ್‌ನ ದರದಲ್ಲಿ ಶೇ.50 ರಿಯಾಯಿತಿ ನೀಡುವ ಉದ್ದೇಶದೊಂದಿಗೆ ಬಿಎಂಟಿಸಿ ಹಾಗೂ ಕಾರ್ಮಿಕ ಇಲಾಖೆ ‘ಪ್ರಿಯದರ್ಶಿನಿ ಬಸ್ ಪಾಸ್’ ಯೋಜನೆ ರೂಪಿಸಿತ್ತು. ಕಾರ್ಮಿಕ ಇಲಾಖೆ ಯೋಜನೆ ಜಾರಿಗೆ ಕಾರ್ಮಿಕರ ಕಲ್ಯಾಣ ನಿಧಿಯಿಂದ 65 ಕೋಟಿ ನೀಡಲು ಒಪ್ಪಿಗೆಯನ್ನೂ ಸೂಚಿಸಿ, ಮೊದಲ ಹಂತದಲ್ಲಿ 5 ಕೋಟಿ ಬಿಡುಗಡೆಗೊಳಿಸಿತ್ತು.
ಮಾರ್ಚ್ ಅಂತ್ಯದೊಳಗೆ ಯೋಜನೆ ಅನುಷ್ಠಾನಗೊಳಿಸಲು ಸಕಲ ಸಿದ್ಧತೆ ನಡೆಸಿ ಕಾರ್ಯಕ್ರಮ ಆಯೋಜನೆಗೆ ಮುಖ್ಯಮಂತ್ರಿಗಳ ದಿನಾಂಕ ಕೇಳಲಾಗಿತ್ತು. ಈ ನಡುವೆ ಕೇಂದ್ರ ಚುನಾವಣಾ ಆಯೋಗ ದಿಢೀರಾಗಿ ಮಾ.27ರಂದು ಚುನಾವಣಾ ನೀತಿ ಸಂಹಿತೆ ಜಾರಿಗೊಳಿಸಿದ್ದರಿಂದ ಕನಸಿನ ಯೋಜನೆಗೆ ಬ್ರೇಕ್ ಬಿದ್ದಿದೆ.
ಈಡೇರದ ಸಚಿವರ ಕನಸು: ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಅವರು ತಮ್ಮ ಅಧಿಕಾರವಧಿ ಪೂರ್ಣಗೊಳ್ಳುವುದೊರಳಗೆ ಈ ಎರಡೂ ಯೋಜನೆಗಳನ್ನು ಅನುಷ್ಠಾನಗೊಳಿಸುವ ಗುರಿ ಹೊಂದಿ ದ್ದರು. ಇದಕ್ಕಾಗಿ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ನೇತೃತ್ವ ದಲ್ಲಿ ಉನ್ನತ ಸಮಿತಿ ರಚಿಸಿದ್ದರು. ಚುನಾವಣಾ ನೀತಿ ಸಂಹಿತೆ ಘೋಷಣೆ ಆಗುವುದರೊಳಗೆ ಯೋಜನೆ ಅನುಷ್ಠಾಗೊಳಿಸಲು ಸಕಲ ಸಿದ್ಧತೆ ನಡೆಸಿತ್ತು. ಆದರೆ ಚುನಾವಣಾ ನೀತಿ ಸಂಹಿತೆಯಿಂದಾಗಿ ಸಚಿವರ ಕನಸಿನ ಯೋಜನೆಗಳು ನೆನಗುದಿಗೆ ಬಿದ್ದಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.