
ನವದೆಹಲಿ : ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣ ಮಾಡಲು ಸುಗ್ರೀವಾಜ್ಞೆ ಹೊರಡಿಸಬೇಕು ಎಂಬ ಸಂಘ ಪರಿವಾರದ ಸಂಘಟನೆಗಳ ಆಗ್ರಹ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಕಾನೂನು ಪ್ರಕ್ರಿಯೆ (ಸುಪ್ರೀಂ ಕೋರ್ಟ್ ವಿಚಾರಣೆ) ಮುಗಿದ ಬಳಿಕವಷ್ಟೇ ಸುಗ್ರೀವಾಜ್ಞೆ ಹೊರತರುವ ವಿಚಾರ ಪರಿಗಣಿಸಲಾಗುವುದು ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಕಾಂಗ್ರೆಸ್ಸಿನ ವಕೀಲರು ಅಡ್ಡಿ ಉಂಟು ಮಾಡುತ್ತಿರುವುದರಿಂದಾಗಿ ನ್ಯಾಯಾಂಗ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದೂ ಆರೋಪಿಸಿದ್ದಾರೆ. ಎನ್‌ಐ ಸುದ್ದಿಸಂಸ್ಥೆಗೆ ವಿವಿಧ ವಿಷಯಗಳ ಬಗ್ಗೆ ಸುದೀರ್ಘ 90 ನಿಮಿಷಗಳ ಸಂದರ್ಶನ ನೀಡಿರುವ ಮೋದಿ ಅವರು, ರಾಮಮಂದಿರ ಕುರಿತ ಪ್ರಶ್ನೆಗಳಿಗೂ ಉತ್ತರಿಸಿದ್ದಾರೆ.
‘ರಾಮಮಂದಿರ ವಿಚಾರ ಬಿಜೆಪಿಗೆ ಸದ್ಯ ಭಾವನಾತ್ಮಕ ವಿಷಯವಾಗಷ್ಟೇ ಉಳಿದಿದೆಯೇ’ ಎಂಬ ಪ್ರಶ್ನೆಗೆ, ‘ಸಂವಿಧಾನದ ವ್ಯಾಪ್ತಿಯೊಳಗೆ ರಾಮಮಂದಿರ ವಿವಾದಕ್ಕೆ ಪರಿಹಾರ ಕಂಡುಹಿಡಿಯುತ್ತೇವೆ ಎಂದು ಬಿಜೆಪಿ ಪ್ರಣಾಳಿಕೆಯಲ್ಲೇ ಹೇಳಿದ್ದೇವೆ. ಪ್ರಕರಣ ಸುಪ್ರೀಂಕೋರ್ಟ್ ನಲ್ಲಿದೆ. ಅದೂ ಕೊನೆಯ ಹಂತದಲ್ಲಿದೆ. ಕಾನೂನು ಪ್ರಕ್ರಿಯೆಗಳು ಮುಗಿಯಲಿ. ಅನಂತರ ಸರ್ಕಾರವಾಗಿ ನಮ್ಮ ಮೇಲೆ ಏನು ಜವಾಬ್ದಾರಿ ಇದೆಯೋ, ಅದನ್ನು ಕಾರ್ಯಸಾಧ್ಯವಾಗಿಸಲು ಎಲ್ಲ ಪ್ರಯತ್ನಗಳನ್ನೂ ಮಾಡುತ್ತೇವೆ’ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.