
ಬೆಂಗಳೂರು : ಯಾವುದೇ ಅಧಿಕಾರ ಇಲ್ಲದ ಕೇವಲ ‘ಗೌರವ’ ಅಧ್ಯಕ್ಷಗಿರಿ ಪಟ್ಟ ಹೊತ್ತು ಓಡಾಡುವುದಕ್ಕಿಂತ ರಾಜೀನಾಮೆ ನೀಡುವುದು ಮೇಲು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಅವರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಮೇಲ್ನೋಟಕ್ಕೆ ಆರೋಗ್ಯದ ಕಾರಣ ಮುಂದೊಡ್ಡುತ್ತಿದ್ದರೂ ಆಂತರ್ಯದಲ್ಲಿ ಪಕ್ಷದಲ್ಲಿನ ಬೆಳವಣಿಗೆಗಳೇ ವಿಶ್ವನಾಥ್ ಅವರ ಬೇಸರಕ್ಕೆ ಮುಖ್ಯವಾದ ಕಾರಣ ಎಂದು ಉನ್ನತ ಮೂಲಗಳಿಂದ ಗೊತ್ತಾಗಿದೆ.
ರಾಜ್ಯಾಧ್ಯಕ್ಷನಾಗಿ ಕಾರ್ಯನಿರ್ವಹಿಸಲು ಆರೋಗ್ಯ ಸಹಕರಿಸುತ್ತಿಲ್ಲ. ಮೇಲಿಂದ ಮೇಲೆ ಆರೋಗ್ಯ ಸಮಸ್ಯೆ ಕಾಡುತ್ತಿರುವುದರಿಂದ ಪಕ್ಷದ ರಾಜ್ಯಾಧ್ಯಕ್ಷನಾಗಿ ಕಾರ್ಯ ನಿರ್ವಹಿಸಲು ಆಗುತ್ತಿಲ್ಲ. ಈ ಸಂಬಂಧ ಈಗಾಗಲೇ ಅಧ್ಯಕ್ಷ ಸ್ಥಾನದಿಂದ ಬಿಡುಗಡೆಗೊಳಿಸುವಂತೆ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರಿಗೆ ಮನವಿ ಮಾಡಿರುವುದಾಗಿ ಹೇಳುತ್ತಿದ್ದರೂ, ಆಂತರ್ಯದಲ್ಲಿ ಮಾತ್ರ ರಾಜ್ಯಾಧ್ಯಕ್ಷನಾಗಿದ್ದರೂ ಸರ್ಕಾರದ ಮಟ್ಟದಲ್ಲಾಗಲಿ, ಪಕ್ಷದ ವಿಚಾರಕ್ಕಾಗಲಿ ತಮ್ಮ ಜೊತೆ ಚರ್ಚಿಸುತ್ತಿಲ್ಲ. ತಮ್ಮ ಗಮನಕ್ಕೂ ತರುತ್ತಿಲ್ಲ ಎಂಬ ಬೇಸರದಿಂದ ಅಧ್ಯಕ್ಷ ಸ್ಥಾನ ತೊರೆಯಲು ನಿರ್ಧರಿಸಿದ್ದಾರೆಂದು ಹೇಳಲಾಗುತ್ತಿದೆ.
ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ವಿಧಾನ ಪರಿಷತ್‌ಗೆ ಜೆಡಿಎಸ್‌ನಿಂದ ನಾಮಕರಣ ಮಾಡುವ ವಿಷಯದಲ್ಲಾಗಲಿ, ಪರಿಷತ್‌ನ ಉಪಸಭಾಪತಿ ಚುನಾವಣೆ ವೇಳೆಯಲ್ಲೂ ಸಹ ಈ ಬಗ್ಗೆ ತಮ್ಮ ಅಭಿಪ್ರಾಯ ಕೇಳದೇ ಇರುವುದು ಅವರಿಗೆ ನೋವು ತಂದಿದೆ. ಇಷ್ಟೇ ಅಲ್ಲ ಜೆಡಿಎಸ್ ಪಾಲಿಗೆ ಬಂದಿರುವ ನಿಗಮ, ಮಂಡಳಿಗಳ ನೇಮಕದ ವಿಷಯದಲ್ಲಿ ಹಾಗೂ ಖಾಲಿ ಇರುವ ಎರಡು ಸಚಿವ ಸ್ಥಾನಗಳ ಬಗ್ಗೆಯೂ ಹೆಚ್ಚಿನ ಚರ್ಚೆ ನಡೆಸದೇ ಇರುವ ವಿಷಯ ಸಹ ಪಕ್ಷದ ನಾಯಕತ್ವದ ಬಗ್ಗೆ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.
ನೇರ ಹಾಗೂ ನಿಷ್ಠುರವಾಗಿ ಮಾತನಾಡುವ ವಿಶ್ವನಾಥ್ ಅವರು, ರಾಜಕೀಯವಾಗಿ ತುಂಬಾ ಹಿಂದೆ ಸರಿದಿದ್ದ ಸಂದರ್ಭದಲ್ಲಿ ಪಕ್ಷದಿಂದ ಟಿಕೆಟ್ ನೀಡಿ ಗೆಲ್ಲಿಸಿದ್ದಲ್ಲದೇ, ಮಹತ್ವದ ಪಕ್ಷದ ರಾಜ್ಯಾಧ್ಯಕ್ಷ ನೀಡಿದ್ದಕ್ಕಾಗಿ ಏನೂ ಮಾತನಾಡದೇ ಅಧ್ಯಕ್ಷ ಸ್ಥಾನದಿಂದ ತಮ್ಮನ್ನು ಮುಕ್ತ ಮಾಡುವಂತೆ ದೇವೇಗೌಡರಿಗೆ ಮನವಿ ಮಾಡಿದ್ದಾರೆ.
ಆದರೆ, ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ದೇವೇಗೌಡರು ವಿಶ್ವನಾಥ್ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಬಿಡುಗಡೆಗೊಳಿಸುವುದು ಅನುಮಾನ. ಪ್ರಬಲ ಕುರುಬ ಸಮುದಾಯಕ್ಕೆ ಸೇರಿರುವ ವಿಶ್ವನಾಥ್ ಅವರು ಹಿಂದೆ ಸರಿದರೆ ಅದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಮುಜುಗರ ಉಂಟಾಗಬಹುದು ಎಂಬ ಕಾರಣಕ್ಕಾಗಿ ಮಾತುಕತೆಯ ಮೂಲಕ ಮನವೊಲಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.