ವಿಶ್ವದ ಅತಿದೊಡ್ಡ ಪಕ್ಷ ಬಿಜೆಪಿಗೆ ವಿಶ್ವದ ಅತಿದೊಡ್ಡ ಕಚೇರಿ..!

By Suvarna Web DeskFirst Published Feb 19, 2018, 9:45 AM IST
Highlights

ದೀನದಯಾಳ ಉಪಾಧ್ಯಾಯ ಮಾರ್ಗದಲ್ಲಿನ ಬಿಜೆಪಿ ಕೇಂದ್ರ ಕಚೇರಿಯ ನೂತನ ಕಟ್ಟಡವನ್ನು ಭಾನುವಾರ ಉದ್ಘಾಟಿಸಲಾಯಿತು. ಈ ಕಚೇರಿಯು 1.7 ಲಕ್ಷ ಚದರ ಅಡಿ ವಿಸ್ತೀರ್ಣ ಹೊಂದಿದ್ದು, ವಿಶ್ವದ ಯಾವುದೇ ರಾಜಕೀಯ ಪಕ್ಷದ ಕಚೇರಿಗಿಂತ ಇದು ದೊಡ್ಡದು ಎಂದು ಹೇಳಲಾಗಿದೆ.

ನವದೆಹಲಿ(ಫೆ.19): 3 ವರ್ಷದ ಹಿಂದೆ ವಿಶ್ವದಲ್ಲೇ ಅತಿದೊಡ್ಡ ಪಕ್ಷ ಎಂಬ ಹಿರಿಮೆಗೆ ಪಾತ್ರವಾಗಿದ್ದ ಬಿಜೆಪಿ, ಇದೀಗ ವಿಶ್ವದಲ್ಲೇ ಅತಿದೊಡ್ಡ ಕಚೇರಿ ಹೊಂದಿರುವ ಪಕ್ಷ ಎಂಬ ಹಿರಿಮೆಯನ್ನೂ ತನ್ನದಾಗಿಸಿಕೊಂಡಿದೆ.

ದೀನದಯಾಳ ಉಪಾಧ್ಯಾಯ ಮಾರ್ಗದಲ್ಲಿನ ಬಿಜೆಪಿ ಕೇಂದ್ರ ಕಚೇರಿಯ ನೂತನ ಕಟ್ಟಡವನ್ನು ಭಾನುವಾರ ಉದ್ಘಾಟಿಸಲಾಯಿತು. ಈ ಕಚೇರಿಯು 1.7 ಲಕ್ಷ ಚದರ ಅಡಿ ವಿಸ್ತೀರ್ಣ ಹೊಂದಿದ್ದು, ವಿಶ್ವದ ಯಾವುದೇ ರಾಜಕೀಯ ಪಕ್ಷದ ಕಚೇರಿಗಿಂತ ಇದು ದೊಡ್ಡದು ಎಂದು ಹೇಳಲಾಗಿದೆ. ಅಲ್ಲದೆ, ಪ್ರತಿಷ್ಠಿತ ಲ್ಯೂಟನ್ಸ್ ವಲಯದಿಂದ ಹೊರಗೆ ಪಕ್ಷದ ಕಚೇರಿ ಸ್ಥಾಪಿಸಿ ಮೊದಲ ರಾಷ್ಟ್ರೀಯ ಪಕ್ಷ ಎಂಬ ಹೆಗ್ಗಳಿಕೆಗೆ ಬಿಜೆಪಿ ಪಾತ್ರವಾಗಿದೆ.

2015ರಲ್ಲಿ 8.8 ಕೋಟಿ ನೊಂದಾಯಿತ ಕಾರ್ಯಕರ್ತರನ್ನು ಹೊಂದುವ ಮೂಲಕ ಬಿಜೆಪಿ ವಿಶ್ವದ ಅತಿದೊಡ್ಡ ಪಕ್ಷ ಹಿರಿಮೆಗೆ ಪಾತ್ರವಾಗಿತ್ತು. ಚೀನಾದ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾವನ್ನು ಹಿಂದಿಕ್ಕೆ ಬಿಜೆಪಿ ಈ ಸಾಧನೆ ಮಾಡಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಕಚೇರಿ ಕಟ್ಟಡ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ, ಪದಾಧಿಕಾರಿಗಳು ಹಾಜರಿದ್ದರು.

ಈ ವೇಳೆ ಮಾತನಾಡಿದ ಪಕ್ಷದ ಅಧ್ಯಕ್ಷ ಅಮಿತ್ ಶಾ, ‘ದಿಲ್ಲಿಯಲ್ಲಿ ಈಗ ಉದ್ಘಾಟನೆಯಾಗಿರುವ ನಮ್ಮ ಪಕ್ಷದ ಕೇಂದ್ರ ಕಚೇರಿ ವಿಶ್ವದ ಯಾವುದೇ ಪಕ್ಷದ ಕಚೇರಿಗಿಂತಲೂ ಅತಿ ದೊಡ್ಡ ಕಚೇರಿಯಾಗಿದೆ. 2015ರಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಿದಂತೆ ಬಿಜೆಪಿ ಪ್ರತಿ ಜಿಲ್ಲೆಯಲ್ಲಿ ಸ್ವಂತ ಕಚೇರಿಯನ್ನು ಹೊಂದುವ ಇರಾದೆ ಹೊಂದಿದೆ ಎಂದರು.

click me!