ಮೋದಿ ಮೇಲೆ ಹರಿಹಾಯ್ದ ಪ್ರವೀಣ್ ತೋಗಾಡಿಯಾ| ಮೋದಿ ಚಹಾ ಮಾರಿದ್ದು ನಾನೆಂದೂ ನೋಡಿಲ್ಲ ಎಂದ ಹಿಂದು ಹುಲಿ| 'ಬಿಜೆಪಿ-ಆರ್‌ಎಸ್‌ಎಸ್‌ನಿಂದ ರಾಮ ಮಂದಿರ ವಿವಾದ ಜೀವಂತ'| 'ಚುನಾವಣಾ ಲಾಭಕ್ಕಾಗಿ ರಾಮ ಮಂದಿರ ವಿವಾದ ಬಳಕೆ'| ಫೆ.9ಕ್ಕೆ ಹೊಸ ಪಕ್ಷ ಸ್ಥಾಪಿಸಲಿರುವ ಪ್ರವೀಣ್ ತೋಗಾಡಿಯಾ|
ಗಾಂಧಿನಗರ(ಜ.22): ಹಿಂದೊಮ್ಮೆ ಸಂಗ್ಯಾ ಬಾಳ್ಯಾ ರೀತಿ ಇದ್ದ ಪ್ರಧಾನಿ ನರೇಂದ್ರ ಮೋದಿ ಮತ್ತು ಪ್ರವೀಣ್ ತೋಗಾಡಿಯಾ, ಇದೀಗ ನಾನೊಂದು ತೀರ ಮತ್ತು ನೀನೊಂದು ತೀರ ಎಂಬಂತಾಗಿದ್ದಾರೆ.
ರಾಜಕೀಯವಾಗಿ ಪರಸ್ಪರ ದೂರವಾಗಿರುವ ಮೋದಿ ಮತ್ತು ತೋಗಾಡಿಯಾ ನಡುವೆ ಇದೀಗ ಮಾತಿನ ಸಮರ ನಡೆಯುತ್ತಿದೆ. ಅದರಲ್ಲೂ ಪ್ರವೀಣ್ ತೋಗಾಡಿಯಾ ಮೋದಿ ವಿರುದ್ಧ ಅವಕಾಶ ಸಿಕ್ಕಾಗಲೆಲ್ಲಾ ಹರಿಹಾಯುತ್ತಿದ್ದಾರೆ.
undefined
ಅಂತಾರಾಷ್ಟ್ರೀಯ ಹಿಂದು ಪರಿಷತ್ ಅಧ್ಯಕ್ಷರಾಗಿರುವ ಪ್ರವಿನ್ ತೋಗಾಡಿಯಾ ಮುಂದಿನ ಫೆ.9ರಂದು ಹೊಸ ಪಕ್ಷ ಸ್ಥಾಪಿಸಲಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್‌ಎಸ್‌ಎಸ್ ಮೇಲೆ ಕಿಡಿಕಾರಿದ್ದಾರೆ.
'ಪ್ರಧಾನಿ ಮೋದಿ ಮತ್ತು ನಾನು ಸುಮಾರು 43 ವರ್ಷಗಳಿಂದ ಪರಿಚಿತರು. ಅವರೆಂದೂ ಚಹಾ ಮಾರಿದ್ದನ್ನು ನಾನು ನೋಡಿಲ್ಲ..' ಎಂದು ಪ್ರವೀಣ್ ತೋಗಾಡಿಯಾ ಹೇಳಿದ್ದಾರೆ. ಮೋದಿ ತಮ್ಮನ್ನು ಚಾಯ್ ವಾಲಾ ಎಂದು ಹೇಳಿಕೊಳ್ಳೋದು ಕೇವಲ ಮತದಾರರನ್ನು ಸೆಳೆಯುವ ಗಿಮಿಕ್ ಎಂದು ಅವರು ಆರೋಪಿಸಿದ್ದಾರೆ.
ಇದೇ ವೇಳೆ ರಾಮ ಮಂದಿರ ಕುರಿತು ಬಿಜೆಪಿ ಮತ್ತು ಆರ್‌ಎಸ್‌ಎಸ್ ನಿಲುವನ್ನು ಟೀಕಿಸಿರುವ ತೋಗಾಡಿಯಾ, ಚುನಾವಣಾ ಲಾಭಕ್ಕಾಗಿ ಮಾತ್ರ ರಾಮ ಮಂದಿರ ವಿವಾದವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ಆರ್‌ಎಸ್‌ಎಸ್ ಕೂಡ ಬಿಜೆಪಿಗೆ ಚುನಾವಣೆಯಲ್ಲಿ ಅನುವು ಮಾಡಿಕೊಡಲು ರಾಮ ಮಂದಿರ ವಿವಾದವನ್ನು ಜೀವಂತವಾಗಿಟ್ಟಿದೆ ಎಂದು ತೋಗಾಡಿಯಾ ಹರಿಹಾಯ್ದರು.
ಅಲ್ಲದೇ ತಮ್ಮ ಪಕ್ಷ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಅಧಿಕಾರಕ್ಕೆ ಬಂದ ಮರುದಿನವೇ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭಿಸುವುದಾಗಿ ತೋಗಾಡಿಯಾ ಭರವಸೆ ನೀಡಿದರು.