
ಮಂಗಳೂರು(ಸೆ. 07): ಸಿಎಂ ಸಿದ್ದರಾಮಯ್ಯನವರನ್ನು ಸುಲ್ತಾನ್ ಸಿದ್ದರಾಮಯ್ಯ ಎಂದು, ಸಚಿವ ರಮಾನಾಥ್ ರೈ ಅವರನ್ನ ರಂಜಾನ್ ರೈ ಎಂದು ಬಿಜೆಪಿ ನಾಯಕ ಪ್ರತಾಪ್ ಸಿಂಹ ಬಣ್ಣಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಇಲ್ಲಿ ನಡೆಯುತ್ತಿರುವ ಮಂಗಳೂರು ಚಲೋ ಬಿಜೆಪಿ ಕಾರ್ಯಕರ್ತರ ಬೃಹತ್ ಮೆರವಣಿಗೆಯಲ್ಲಿ ಭಾಗಹಿಸಿದ್ದ ಪ್ರತಾಪ್ ಸಿಂಹ, ಕರ್ನಾಟಕದಲ್ಲಿ ಉಗ್ರವಾದಿಗಳಿಗೆ ಸರಕಾರ ಮಣೆ ಹಾಕುತ್ತಿದೆ ಎಂದು ಆರೋಪಿಸಿದ್ದಾರೆ. "ಕರಾವಳಿ ಎಂದರೆ ರಾಣಿ ಅಬ್ಬಕ್ಕ ದೇವಿ ನೆನಪಾಗುತ್ತಿದ್ದರು. ಈಗ ಯಾಸಿನ್ ಭಟ್ಕಳ್, ರಿಯಾಜ್ ಭಟ್ಕಳ್ ನೆನಪಾಗ್ತಾರೆ. ಈಗ ಕೆಎಫ್'ಡಿ, ಪಿಎಫ್'ಐನಂತರ ಹೊಸ ಬೀಜಗಳು ಹುಟ್ಟಿಕೊಂಡಿವೆ," ಎಂದು ಪ್ರತಾಪ್ ಸಿಂಹ ಘರ್ಜಿಸಿದರು. ಇದೇ ವೇಳೆ, ಮಂಗಳೂರಿನ ಕಾಂಗ್ರೆಸ್ ಮುಖಂಡ ಹಾಗೂ ಸಚಿವ ರಮಾನಾಥ್ ರೈ ಅವರನ್ನು ರಂಜಾನ್ ರೈ ಎಂದು ಅವರು ಬಣ್ಣಿಸಿದರು. ರಮಾನಾಥ್ ರೈ ಅವರನ್ನು ರಂಜಾನ್ ರೈ ಎಂದು ಪ್ರತಾಪ್ ಸಿಂಹ ಹೇಳುತ್ತಿದ್ದಂತೆಯೇ ಕಾರ್ಯಕರ್ತರು ಕರತಾಡನ ಮಾಡಿ ಹರ್ಷ ವ್ಯಕ್ತಪಡಿಸಿದರು.
ಕೇಸ್ ಕ್ಲೋಸ್..:
ಹಿಂದಿನ ಸರಕಾರದ ಅವಧಿಯಲ್ಲಿ ಕೆಎಫ್'ಡಿ, ಪಿಎಫ್'ಐ ಸಂಘಟನೆಯವರು ನಿಷೇಧಾಜ್ಞೆ ಉಲ್ಲಂಘಿಸಿ ಇದೇ ಜ್ಯೋತಿ ಸರ್ಕಲ್'ನಲ್ಲಿ ಸೇರುತ್ತಾರೆ... ಎಸಿಪಿ ಸುರೇಶ್'ಗೆ ಬ್ಲೇಡ್'ನಲ್ಲಿ ಹೊಡೀತಾರೆ... ಪೊಲೀಸ್ ಪೇದೆಯ ದೇಹವನ್ನು ಟಾಸ್ ಮಾಡಿ ಕೇಕೆ ಹಾಕ್ತಾರೆ... ಕೆಎಫ್'ಡಿ, ಪಿಎಫ್'ಐನವರು ಶಿವಮೊಗ್ಗ, ಬೆಂಗಳೂರು, ಚಿಕ್ಕಮಗಳೂರು ಇಲ್ಲೆಲ್ಲಾ ಗಲಾಟೆ ಮಾಡ್ತಾರೆ... ಅವರ ಮೇಲೆ 175 ಕೇಸ್'ಗಳು ದಾಖಲಾಗುತ್ತವೆ...
"ಇದೇ ಸಿದ್ದರಾಮಯ್ಯ ಆಗ ವಿರೋಧ ಪಕ್ಷದ ಮುಖಂಡನಾಗಿ ಇವೆಲ್ಲವನ್ನೂ ಹತ್ತಿರದಿಂದ ನೋಡಿರುತ್ತಾರೆ. ಸಿಎಂ ಆದ ಬಳಿಕ ಇವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತಾರೆಂದು ನಾವು ನಿರೀಕ್ಷಿಸಿದ್ದೆವು. ಆದರೆ, ಸಿದ್ದರಾಮಯ್ಯ ಮಾಡಿದ್ದೇನು? 4 ಸಾವಿರಕ್ಕೂ ಹೆಚ್ಚು ಜನರ ಮೇಲಿದ್ದ 175 ಪ್ರಕರಣಗಳನ್ನು ಹಿಂದಕ್ಕೆ ಪಡೆಯುತ್ತಾರೆ," ಎಂದು ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು ಅಂದ್ರೆ ಸುಲ್ತಾನ್ ನೆನಪಾಗ್ತಾರೆ:
"ಅಂದು ಮೈಸೂರು ಅಂದ್ರೆ ಒಡೆಯರ್ ಮಹಾರಾಜರು ನೆನಪಾಗ್ತಾ ಇದ್ದರು. ಈಗ ಮೈಸೂರು ಎಂದರೆ ಟಿಪ್ಪು ಸುಲ್ತಾನ್ ನೆನಪಾಗ್ತಾರೆ. ಅದಕ್ಕೆ ಕಾರಣ ನಮ್ಮ ಸುಲ್ತಾನ್ ಸಿದ್ದರಾಮಯ್ಯ" ಎಂದು ಬಿಜೆಪಿಯ ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಪ್ರತಾಪ್ ಸಿಂಹ ಗುಡುಗಿದರು.
ಇದೇ ವೇಳೆ, ಜ್ಯೋತಿ ಸರ್ಕಲ್'ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಆರ್.ಅಶೋಕ್, ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್ ಮೊದಲಾದ ಬಿಜೆಪಿ ಮುಖಂಡರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.