ಪ್ರತಾಪ್ ರಾಜಕೀಯವಾಗಿ ಅಪ್ರಬುದ್ಧ: ಸಿಎಂ

By Suvarna Web DeskFirst Published Dec 7, 2017, 2:00 PM IST
Highlights

ಕಾನೂನು-ಸುವ್ಯವಸ್ಥೆ  ಕಾಪಾಡಲು ಮೈಸೂರು ಎಸ್ಪಿ ಜತೆ ಕೆಂಪಯ್ಯ ಮಾತಾಡಿದರೆ ತಪ್ಪೇನು?

ಬೆಂಗಳೂರು: ಹನುಮ ಜಯಂತಿ ವೇಳೆ ಹುಣಸೂರಿನಲ್ಲಿ ಶಾಂತಿ- ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸರೇ ಮಾರ್ಗವನ್ನು ನಿರ್ಧರಿಸಿ, ಅನುಮತಿ ನೀಡಿದ್ದರು. ಆದರೆ ಈ ಪ್ರಕರಣದಲ್ಲಿ ಸಂಸದ ಪ್ರತಾಪ್ ಸಿಂಹ ರಾಜಕೀಯ ಅಪ್ರಬುದ್ಧತೆಯಿಂದ ವರ್ತಿಸುತ್ತಿದ್ದು, ಉದ್ದೇಶಪೂರ್ವಕವಾಗಿ ಗಲಾಟೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಡಾ.ಬಿ.ಆರ್.ಅಂಬೇಡ್ಕರ್ ಮಹಾಪರಿನಿರ್ವಾಣ ದಿನದ ಅಂಗವಾಗಿ ಬುಧವಾರ ವಿಧಾನ ಸೌಧದ ಎದುರು ಡಾ. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲಾ ಪೊಲೀಸ್ ವರಿಷ್ಠ ರವಿ ಚೆನ್ನಣ್ಣವರ್ ಜತೆ ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಒಂದು ವೇಳೆ ಮಾತನಾಡಿದರೆ ತಪ್ಪೇನಿದೆ? ಎಂದು ಪ್ರಶ್ನಿಸಿದರು.

‘ರಾಜ್ಯ ಸರ್ಕಾರದ ಸಾಧನೆಗಳನ್ನು ಸಾರಲು ಹಾಗೂ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಡಿ.13ರಿಂದ ಪ್ರವಾಸ ಮಾಡುತ್ತಿದ್ದೇನೆ. ನಾನೇನು ಇದೇ ಮೊದಲ ಬಾರಿಗೆ ಪ್ರವಾಸ ಮಾಡುತ್ತಿಲ್ಲ. ಈ ರೀತಿ ವರ್ಷಪೂರ್ತಿ ಪ್ರವಾಸ ಮಾಡುತ್ತಿದ್ದೇನೆ. ಈಗಲೂ ಅದನ್ನು ಮುಂದುವರಿಸುತ್ತೇನೆ. ಬಿಜೆಪಿಯವರಿಗೆ ನಾನು ಪ್ರವಾಸ ಮಾಡಿದರೆ ಭಯ, ಅದಕ್ಕಾಗಿಯೇ ಟೀಕೆ ಮಾಡುತ್ತಾರೆ’ ಎಂದು ಹೇಳಿದರು.

ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರಿಗೆ ರಾಜ್ಯದ ಉನ್ನತ ಶಿಕ್ಷಣ ಇಲಾಖೆಯಲ್ಲಿ ನಡೆದಿದೆ ಎನ್ನ ಲಾದ ಹಗರಣ ಕುರಿತಂತೆ ವಿದ್ಯಾರ್ಥಿ ಕಾಂಗ್ರೆಸ್‌ನಿಂದ ದೂರು ನೀಡಿರುವ ಬಗೆಗೆ ಪ್ರತಿಕ್ರಿಯೆಗೆ ನಿರಾಕರಿಸಿದರು.

ಕಾಂಗ್ರೆಸ್ ಬದ್ಧತೆ ಯಾರಿಗಿದೆ?: ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರು ಸಂವಿಧಾನದ ಪೀಠಿಕೆಯಲ್ಲಿ ಹೇಳಿ ಕೊಟ್ಟಿರುವ ಆಶಯಗಳನ್ನು ಯಥಾವತ್ತಾಗಿ ಅಳವಡಿಸಿಕೊಂಡು ಬಂದಿರುವುದು ಕಾಂಗ್ರೆಸ್ ಪಕ್ಷ. ನಮ್ಮದು ಸಂವಿಧಾನದ ಆಶಯಗಳಂತೆ ನಡೆಯುತ್ತಿರುವ ಸರ್ಕಾರ ಎಂದು ಸಮರ್ಥಿಸಿಕೊಂಡರು. ಸಚಿವರಾದ ಡಾ.ಎಚ್ .ಸಿ. ಮಹದೇವಪ್ಪ, ಎಚ್.ಆಂಜನೇಯ, ಆರ್.ವಿ.ದೇಶಪಾಂಡೆ, ಸಂಸದ ಧ್ರುವನಾರಾಯಣ್ ಮತ್ತಿತರರಿದ್ದರು.

click me!