
ನವದೆಹಲಿ(ಜೂ.8): ತಂದೆ ಪ್ರಣಬ್ ಮುಖರ್ಜಿ ನಿನ್ನೆ ಆರ್‌ಎಸ್‌ಎಸ್ ಸಭೆಯಲ್ಲಿ ಪಾಲ್ಗೊಂಡಿದ್ದಕ್ಕೆ ಪುತ್ರಿ ಶರ್ಮಿಷ್ಠಾ ಮುಖರ್ಜಿ ಮತ್ತೊಮ್ಮೆ ಸಿಡುಕಿದ್ದಾರೆ. ‘ನಿಮಗೆ ಮೊದಲೇ ಹೇಳಿದ್ದೆ, ಸಂಘದ ಕಾರ್ಯಕ್ರಮಕ್ಕೆ ಹೋಗಬೇಡಿ ಎಂದು, ಈಗ ನೋಡಿ ಏನಾಗಿದೆ' ಎಂದು ಶರ್ಮಿಷ್ಟಾ ತಂದೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಆರ್‌ಎಸ್‌ಎಸ್ ಕಾರ್ಯಕ್ರಮಕ್ಕೆ ಹೋಗುವ ಮೂಲಕ ನಿಮ್ಮ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಲು ನೀವೇ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಹೇಳಿದ್ದೆ. ಆದರೂ ನೀವು ಮಾತು ಲೆಕ್ಕಿಸದೇ ಹೋದಿರಿ. ಇದೀಗ ನಿಮ್ಮ ಫೋಟೋವನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ನನಗೆ ಯಾವ ಭಯವಿತ್ತೋ ಅದು ಇಂದು ನಿಜವಾಗಿದೆ. ಕಾರ್ಯಕ್ರಮ ಮುಕ್ತಾಯವಾದ ಕೆಲವೇ ಗಂಟೆಗಳಲ್ಲಿ ಇದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ’ ಎಂದು ಶರ್ಮಿಷ್ಟಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಣಬ್ ಭಾಗಿಯಾಗಿದ್ದ ನಾಗ್ಪುರ್ ಕಾಯರ್ಯಕ್ರಮದ ಫೋಟೋಗಳನ್ನು ಕೆಲವು ಕಿಡಿಗೇಡಿಗಳು, ಪ್ರಣಬ್ ಆರ್‌ಎಸ್‌ಎಸ್ ಸಮವಸ್ತ್ರ ಧರಿಸಿರುವಂತೆ ಮತ್ತು ಸಂಘದ ಟೋಪಿ ಧರಿಸಿ ವಂದನೆ ಮಾಡುತ್ತಿರುವಂತೆ ಫೋಟೋಶಾಪ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಲಾಗಿದೆ. ಇದಕ್ಕೆ ಶರ್ಮಿಷ್ಠಾ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುಬ್ರಮಣಿಯನ್ ಸ್ವಾಮಿಗೆ ತಿರುಗೇಟು:
ಇನ್ನು ಶರ್ಮಿಷ್ಠಾ ಮಾಡಿದ್ದ ನಿನ್ನೆಯ ಟ್ವಿಟ್‌ಗೆ ಗೇಲಿ ಮಾಡಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಟ್ವಿಟ್ ಮಾಡಿದ್ದರು. ‘ನನ್ನ ಮಗಳು ಕೂಡ ಚರ್ಚೆ ಮಾಡುತ್ತಿರುತ್ತಾಳೆ. ಆಕೆಯ ಆಲೋಚನಾ ಲಹರಿಗೂ ನನ್ನ ಆಲೋಚನಾ ಲಹರಿಗೂ ಅಜಗಜಾಂತರ ವ್ಯತ್ಯಾಸವಿದೆ. ನನ್ನ ಸ್ವಂತ ಮಗಳೇ ನನ್ನ ಮಾತು ಕೇಳುವುದಿಲ್ಲ..’ಎಂದು ಹೇಳಿದ್ದರು. ಈ ಹೇಳಿಕೆಗೆ ಇಂದು ಪ್ರತಿಕ್ರಿಯೆ ನೀಡಿರುವ ಶರ್ಮಿಷ್ಟಾ, ‘ಹೌದು.. ನಾನು ಕೂಡ ಹಾಗೆಯೇ ಬೆಳೆದಿದ್ದು. ನನ್ನ ಭಾವನೆಗಳನ್ನು ನಾನು ಯಾವುದೇ ಮುಚ್ಚು ಮರೆ ಇಲ್ಲದೆ ಮುಜುಗರವಿಲ್ಲದೆ ಸಾರ್ವಜನಿಕವಾಗಿಯೇ ವ್ಯಕ್ತಪಡಿಸುತ್ತೇನೆ..’ಎಂದು ಪ್ರತಯುತ್ತರ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.