
ಬೆಂಗಳೂರು : ದೆಹಲಿಯಲ್ಲಿ ದೇವಸ್ಥಾನಗಳಿಗೆ ಭೇಟಿ ನೀಡದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಚುನಾವಣೆ ಹಿನ್ನೆಲೆ ಗುಜರಾತ್ ನಂತರ ಇದೀಗ ಕರ್ನಾಟಕದಲ್ಲೂ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ಕೇಂದ್ರ ಸಚಿವರೂ ಆಗಿರುವ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಲೇವಡಿ ಮಾಡಿದ್ದಾರೆ. ಸೋಮವಾರ ಸಂಜೆ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜಾವಡೇಕರ್ ಅವರು ರಾಹುಲ್ ವಿರುದ್ಧ ಹರಿಹಾಯ್ದರು.
ರಾಹುಲ್ ಗಾಂಧಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕಗೊಂಡ ದಿನವೂ ದೇವಸ್ಥಾನಕ್ಕೆ ಭೇಟಿ ನೀಡಲಿಲ್ಲ. ಆದರೆ, ಗುಜರಾತ್ ಚುನಾವಣೆ ವೇಳೆ ಅಲ್ಲಿಗೆ ತೆರಳಿ ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡಿದರು. ಇದೀಗ ಕರ್ನಾಟಕ ಚುನಾವಣೆ ಹಿನ್ನೆಲೆ ಇಲ್ಲಿಯೂ ದೇವಸ್ಥಾನಗಳಿಗೆ ತೆರಳುತ್ತಿದ್ದಾರೆ. ದೇವಸ್ಥಾನಗಳಿಗೆ ಭೇಟಿ ನೀಡಿದರೆ ನಿಜವಾದ ಭಕ್ತರು ಯಾರು, ಕೇವಲ ‘ಚುನಾವಣೆಗಾಗಿ ಭಕ್ತಿ’ ಪ್ರದರ್ಶನ ಮಾಡುತ್ತಿರುವುದು ಯಾರು ಎಂಬುದನ್ನು ರಾಜ್ಯದ ಜನತೆ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು.
ಪಕೋಡಾ ಮಾರಾಟದ ಬಗ್ಗೆ ಕಾಂಗ್ರೆಸ್ ನಾಯಕರು ಟೀಕೆ ಮಾಡುತ್ತಿದ್ದಾರೆ. ಇದರಿಂದ ನಮ್ಮ ದೇಶದ ಬಡವರು, ಶ್ರಮದಿಂದ ಜೀವನ ಮಾಡುವ ಜನಸಾಮಾನ್ಯರ ಆತ್ಮಗೌರವ ಹಾಗೂ ಘನತೆಗೆ ಧಕ್ಕೆ ಉಂಟಾಗುತ್ತಿದೆ. ಇಂಥ ಹೇಳಿಕೆಗಳಿಂದ ಆ ಪಕ್ಷದ ಹಾಗೂ ಪಕ್ಷದ ನಾಯಕರ ನಿಜವಾದ ಬಣ್ಣ ಬಯಲಾಗಿದೆ ಎಂದರು.
‘ರೈತರ ಬಗ್ಗೆ ತೋರಿಕೆಗೆ ಕಾಳಜಿ ಪ್ರದರ್ಶನ’ : ಇದೇ ವೇಳೆ ರೈತರ ಕುರಿತ ರಾಹುಲ್ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಜಾವಡೇಕರ್, ‘ರಾಹುಲ್ ಗಾಂಧಿ ಅವರು ತೋರಿಕೆಗಾಗಿ ರೈತರ ಬಗ್ಗೆ ಕಾಳಜಿ ಪ್ರದರ್ಶಿಸುತ್ತಿದ್ದಾರೆ. ವಾಸ್ತವವಾಗಿ ಕರ್ನಾಟಕದಲ್ಲಿ ಮೆಕ್ಕೆಜೋಳದ ದರವು ಕ್ವಿಂಟಾಲ್‌ಗೆ .1,200ಕ್ಕೆ ಇಳಿದಿದೆ. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಮಾರುಕಟ್ಟೆಮಧ್ಯಪ್ರವೇಶ ಯೋಜನೆಯನ್ನು ಜಾರಿಗೆ ತಂದು ಖರೀದಿ ಕೇಂದ್ರ ತೆರೆಯಲಿಲ್ಲ. ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಕ್ವಿಂಟಾಲ್‌ಗೆ .1,550ಕ್ಕೆ ಖರೀದಿಸಲು ಕ್ರಮ ಕೈಗೊಂಡಿದ್ದರು. ಜತೆಗೆ ಆವರ್ತ ನಿಧಿಯನ್ನೂ ಸ್ಥಾಪಿಸಿದ್ದರು’ ಎಂದು ತರಾಟೆಗೆ ತೆಗೆದುಕೊಂಡರು.
ಉತ್ತರ ಪ್ರದೇಶ, ಮಹಾರಾಷ್ಟ್ರ ರಾಜ್ಯಗಳು ಕೇಂದ್ರದ ಯಾವುದೇ ನೆರವು ಇಲ್ಲದೇ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲವನ್ನೂ ಮನ್ನಾ ಮಾಡಿವೆ. ಆದರೆ ಕರ್ನಾಟಕದಲ್ಲಿ ಕೇವಲ ಸಹಕಾರಿ ಸಂಘಗಳ ಸಾಲವನ್ನಷ್ಟೇ ಮನ್ನಾ ಮಾಡಲಾಗಿದೆ ಎಂದು ಟೀಕಿಸಿದರು.
ರೈತರಿಗೆ ಲಾಭದಾಯಕ ಬೆಲೆ ದೊರೆಯಬೇಕು ಎನ್ನುವ ಸಲುವಾಗಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರದ ಅವಧಿಯಲ್ಲಿ ಸ್ವಾಮಿನಾಥನ್ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಯ ಶಿಫಾರಸಿನಂತೆ ರೈತರಿಗೆ ಉತ್ತಮ ಬೆಲೆ ದೊರೆಯುವಂತೆ ಮಾಡುವಲ್ಲಿ ಹಿಂದಿನ ಯುಪಿಎ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಆದರೆ ಈಗ ನರೇಂದ್ರ ಮೋದಿ ಪ್ರಧಾನಿಯಾದ ನಂತರ ಇದೇ ಮೊದಲ ಬಾರಿಗೆ ರೈತರಿಗೆ ಉತ್ಪಾದನಾ ವೆಚ್ಚ ಮತ್ತು ಶೇ.50ರಷ್ಟುಹೆಚ್ಚುವರಿ ದರವನ್ನು ಒದಗಿಸಲು ತೀರ್ಮಾನಿಸಲಾಗಿದೆ. ಇದು ರೈತರಿಗೆ ನೀಡಿರುವ ಉತ್ತಮ ಕೊಡುಗೆ ಎಂದು ಬಣ್ಣಿಸಿದರು.
ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕವಾದ ದಿನವೂ ರಾಹುಲ್ ಗಾಂಧಿ ದೇವಸ್ಥಾನಕ್ಕೆ ಭೇಟಿ ನೀಡಿಲ್ಲ. ಗುಜರಾತ್ ಚುನಾವಣೆ ಸಂದರ್ಭವಷ್ಟೇ ಅಲ್ಲಿನ ದೇವಸ್ಥಾನಗಳಿಗೆ ಭೇಟಿ ನೀಡಿದರು. ಈಗ ಕರ್ನಾಟಕದಲ್ಲಿ ಚುನಾವಣೆ ಹತ್ತಿರವಾಗುತ್ತಿದೆ. ಇಲ್ಲಿಯೂ ದೇವಸ್ಥಾನಕ್ಕೆ ತೆರಳುತ್ತಿದ್ದಾರೆ. ನಿಜವಾದ ಭಕ್ತರು ಯಾರು, ‘ಚುನಾವಣಾ ಭಕ್ತಿ’ ಪ್ರದರ್ಶಿಸುತ್ತಿರುವವರು ಯಾರು ಎಂಬುದನ್ನು ರಾಜ್ಯದ ಜನತೆ ಅರ್ಥ ಮಾಡಿಕೊಳ್ಳುತ್ತಾರೆ.
- ಪ್ರಕಾಶ್ ಜಾವಡೇಕರ್, ಕೇಂದ್ರ ಸಚಿವ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.