
ಮುಂಬೈ(ಮೇ.07): ಎಸ್.ಎಸ್.ರಾಜಮೌಳಿ ನಿರ್ದೇಶನದ ಬಾಹುಬಲಿ-2 ಚಲನಚಿತ್ರ, ಭಾರತೀಯ ಚಿತ್ರರಂಗದಲ್ಲಿ ಸಾರ್ವಕಾಲಿಕ ದಾಖಲೆಯೊಂದನ್ನು ಸೃಷ್ಟಿಸಿದೆ.
ಬಿಡುಗಡೆಯಾದ ಮೊದಲ ವಾರದಲ್ಲೇ ಚಿತ್ರ ವಿಶ್ವದಾದ್ಯಂತ ಒಟ್ಟಾರೆ 925 ಕೋಟಿ ರು.ಗಳಿಸುವ ಮೂಲಕ ಇದುವರೆಗೆ ಭಾರತದ ಯಾವುದೇ ಚಲನಚಿತ್ರ ಮಾಡದ ಸಾಧನೆಯನ್ನು ಮಾಡಿದೆ. ಅಷ್ಟೇ ಅಲ್ಲ, ಮುಂದಿನ ಒಂದೆರಡು ದಿನಗಳಲ್ಲಿ ಚಿತ್ರ 1000 ಕೋಟಿ ರು. ಸಂಪಾದಿಸುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿದೆ.
ಅಮೀರ್ ಖಾನ್ ಅಭಿನಯದ ‘ಪಿಕೆ’ ಚಿತ್ರ ವಿಶ್ವದಾದ್ಯಂತ 792 ಕೋಟಿ ರು.ಗಳಿಕೆಯ ಮೂಲಕ, ಅತ್ಯಂತ ಹೆಚ್ಚುಗಳಿಕೆ ಮಾಡಿದ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆ ಹೊಂದಿತ್ತು. ಆ ದಾಖಲೆಯನ್ನು ಇದೀಗ ಬಾಹುಬಲಿ 2 ಮುರಿದಿದೆ. ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ತಮನ್ನಾ ಭಾಟಿಯಾ, ರಮ್ಯಾ ಕೃಷ್ಣನ್ ಮತ್ತು ಸತ್ಯರಾಜ್ ಅಭಿನಯದ ಬಾಹುಬಲಿ-2 ಈಗಾಗಲೇ 925 ಕೋಟಿ ಗಲ್ಲಾ ಪೆಟ್ಟಿಗೆ ಲೂಟಿ ಮಾಡಿದೆ.
ಇದಲ್ಲದೇ, ಹಿಂದಿ ಅವತರಣಿಕೆಯ ಬಾಹುಬಲಿ-2 ಒಂದೇ ವಾರದಲ್ಲಿ 247 ಕೋಟಿ ಗಳಿಕೆ ಮಾಡುವ ಮೂಲಕ ಆಮೀರ್ ಖಾನ್ ಅವರ ದಂಗಲ್(38 ಕೋಟಿ), ಸಲ್ಮಾನ್ ಖಾನ್ ಅವರ ಸುಲ್ತಾನ್ ಚಿತ್ರಗಳನ್ನು ಮೂಲೆ ಗುಂಪು ಮಾಡಿದೆ. ಇನ್ನು ತೆರೆಕಂಡ ಮೊದಲ ದಿನವೇ ಬಾಹುಬಲಿ-2 ಎಲ್ಲ ಭಾಷೆಗಳಲ್ಲಿ 121.5 ಕೋಟಿ ತನ್ನ ಖಜಾನೆಗೆ ಬಾಚಿಕೊಂಡಿದೆ. ಇದು ಕೂಡಾ ಹೊಸ ದಾಖಲೆ. ಅಮೆರಿಕ ಬಾಕ್ಸ್ ಆಫೀಸ್‌ನಲ್ಲಿ ಬಾಹುಬಲಿ-2ಗೆ ನಂಬರ್ 3ನೇ ಸ್ಥಾನ ಲಭಿಸಿದ್ದು, ಭಾರತೀಯ ಚಿತ್ರಕ್ಕೆ ಸಿಕ್ಕ ಗರಿಯಾಗಿದೆ. ಅಮೆರಿಕದಲ್ಲಿ ಚಿತ್ರ ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲೇ ಬಾಹುಬಲಿ-2 62 ಕೋಟಿ ಗಳಿಸಿದೆ. ‘ನಿಜವಾದ ಚಾರಿತ್ರಿಕ ಚಿತ್ರವನ್ನು ನಿರ್ದೇಶನ ಮಾಡಿದ ಎಸ್.ಎಸ್.ರಾಜಮೌಳಿ, ಅರ್ಕಾ ಮೀಡಿಯಾ ವರ್ಕ್ಸ್ ಸೇರಿ ಬಾಹುಬಲಿ ಇಡೀ ತಂಡಕ್ಕೆ ನಾವು ಅಭಿನಂದನೆ ಸಲ್ಲಿಸುತ್ತೇವೆ. ಬಾಹುಬಲಿ-2 ಭಾರತದಲ್ಲಿ ಕೇವಲ ಐಮ್ಯಾಕ್ಸ್ ದಾಖಲೆಗಳನ್ನು ಪುಡಿಗಟ್ಟಲಿಲ್ಲ. ಬದಲಿಗೆ ವಿಶ್ವಾದ್ಯಂತ ಇರುವ ಐಮ್ಯಾಕ್ಸ್ ಶೋತೃಗಳನ್ನು ಸೆಳೆಯಿತು,’ ಎಂದು ಉತ್ತರ ಅಮೆರಿಕದ ಐಮ್ಯಾಕ್ಸ್ ಎಂಟರ್‌ಟೇನ್‌ಮೆಂಟ್ ಇಇಒ ಗ್ರೆಗ್ ಮಾಸ್ಟರ್ ಹೇಳಿದ್ದಾರೆ.
ದಂಗಲ್ ಕೂಡಾ ದಾಖಲೆ ಪಟ್ಟಿಗೆ
ಬಾಹುಬಲಿ 2, 1000 ಕೋಟಿ ರು.ಸಂಪಾದಿಸಿದ ಮೊದಲ ಚಿತ್ರವಾಗಲಿದ್ದರೆ, ದಂಗಲ್ ಈ ಸಾಧನೆ ಮಾಡಿದ ಎರಡನೇ ಚಿತ್ರವಾಗಬಹುದು ಎಂಬ ನಿರೀಕ್ಷೆ ಇದೆ. ಕಾರಣ ದಂಗಲ್ ಈಗಾಗಲೇ 730 ಕೋಟಿ ರು. ಸಂಪಾದಿಸಿದೆ. ಜೊತೆಗೆ ಎರಡು ದಿನಗಳ ಹಿಂದೆ ಚೀನಾದಲ್ಲಿ ಬಿಡುಗಡೆಯಾದ ದಂಗಲ್ ಸೂಪರ್‌ಹಿಟ್ ಆಗಿದ್ದು, ಮೊದಲ ದಿನವೇ 15 ಕೋಟಿ ರು.ಸಂಪಾದಿಸಿದೆ. ಮುಂದಿನ ಕೆಲ ದಿನ ಇದೇ ಗಳಿಕೆ ಮುಂದುವರೆದರೆ ಅದು ಕೂಡಾ 1000 ಕೋಟಿ ರು. ತಲುಪಿದರೆ ಅಚ್ಚರಿ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.