ಏಪ್ರಿಲ್‌ನಿಂದ ಪ್ರಿಪೇಯ್ಡ್‌ ವಿದ್ಯುತ್‌ ಸ್ಮಾರ್ಟ್‌ ಮೀಟರ್‌ ಕಡ್ಡಾಯ?

By Web DeskFirst Published Dec 25, 2018, 9:05 AM IST
Highlights

ಏಪ್ರಿಲ್‌ನಿಂದ ಪ್ರಿಪೇಯ್ಡ್‌ ವಿದ್ಯುತ್‌ ಸ್ಮಾರ್ಟ್‌ ಮೀಟರ್‌ ಕಡ್ಡಾಯ?  ಮೊಬೈಲ್‌ನಂತೆ ರೀಚಾರ್ಜ್ ಮಾಡಿಸಿ, ಎಷ್ಟು ಬೇಕೋ ಅಷ್ಟೇ ವಿದ್ಯುತ್‌ ಬಳಸಿ | ವಿದ್ಯುತ್‌ ಮೀಟರ್‌ ದೋಷದ ಸಮಸ್ಯೆ ಇನ್ನಿಲ್ಲ: ಸಚಿವ ಆರ್‌.ಕೆ. ಸಿಂಗ್‌

ನವದೆಹಲಿ (ಡಿ. 25):  ವಿದ್ಯುತ್‌ ಮೀಟರ್‌ಗಳ ಲೋಪದಿಂದಾಗಿ ಪ್ರತಿ ತಿಂಗಳು ದುಬಾರಿ ಬಿಲ್‌ ಬರುತ್ತಿದೆ ಎಂದು ದೂರುವ ಗ್ರಾಹಕರು ಹೆಚ್ಚಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 2019 ರ ಏಪ್ರಿಲ್‌ 1ರಿಂದ ದೇಶದ ಎಲ್ಲ ರಾಜ್ಯಗಳಲ್ಲಿ ಪ್ರಿಪೇಯ್ಡ್‌ ಸ್ಮಾರ್ಟ್‌ ಮೀಟರ್‌ಗಳನ್ನು ಕಡ್ಡಾಯಗೊಳಿಸಲು ಮುಂದಾಗಿದೆ.

ಪ್ರಿಪೇಯ್ಡ್‌ ಮೊಬೈಲ್‌ ಫೋನ್‌ಗಳನ್ನು ಯಾವ ರೀತಿ ರೀಚಾರ್ಜ್ ಮಾಡಿಸಲಾಗುತ್ತದೆಯೋ ಅದೇ ರೀತಿ ಈ ಸ್ಮಾರ್ಟ್‌ ಮೀಟರ್‌ಗಳಿಗೆ ಹಣ ತುಂಬಿಸಬೇಕಾಗುತ್ತದೆ. ಇದಕ್ಕಾಗಿ ರೀಚಾರ್ಜ್ ಕಾರ್ಡ್‌ಗಳೂ ಲಭ್ಯವಿರುತ್ತವೆ. ಎಷ್ಟುದಿನ, ಎಷ್ಟುಗಂಟೆ ವಿದ್ಯುತ್‌ ಬಳಸುತ್ತೀರೋ ಅಷ್ಟಕ್ಕೆ ಶುಲ್ಕ ಭರಿಸಿದರೆ ಸಾಕು. ಯಾವ ಹೊತ್ತಿನಲ್ಲಿ ಎಷ್ಟುವಿದ್ಯುತ್‌ ಬಳಸುತ್ತೀರಿ ಎಂಬ ಲೆಕ್ಕವೂ ಈ ಮೀಟರ್‌ನಿಂದ ಲಭ್ಯವಾಗುತ್ತದೆ. ವಿದ್ಯುತ್‌ ವಿತರಣಾ ಕಂಪನಿಗಳಿಗೂ ವಿದ್ಯುತ್ತಿನ ಬೇಡಿಕೆ ಕುರಿತು ನಿಖರ ಮಾಹಿತಿ ಲಭ್ಯವಾಗಲಿದೆ.

ಹಾಲಿ ಇರುವ ಮೀಟರ್‌ಗಳಿಂದ ದುಬಾರಿ ಬಿಲ್‌ ಬರುತ್ತಿದೆ ಎಂದು ಗ್ರಾಹಕರಿಂದ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಸ್ಮಾರ್ಟ್‌ ಮೀಟರ್‌ಗಳನ್ನು ಏ.1 ರಿಂದ ಕಡ್ಡಾಯವಾಗಿ ಜಾರಿಗೆ ತರಲು ಮುಂದಾಗಿದ್ದೇವೆ. ಆದರೆ ಈ ತಂತ್ರಜ್ಞಾನದಲ್ಲಿ ಒಂದು ಸಮಸ್ಯೆಯೂ ಇದೆ. ಮೀಟರ್‌ಗಳು ಸಿಗುತ್ತಿಲ್ಲ. ಆದಾಗ್ಯೂ ಜಾರಿಗೆ ಉದ್ದೇಶಿಸಿದ್ದೇವೆ ಎಂದು ಕೇಂದ್ರ ವಿದ್ಯುತ್‌ ಸಚಿವ ಆರ್‌.ಕೆ. ಸಿಂಗ್‌ ಅವರು ತಿಳಿಸಿದ್ದಾರೆ.

ವಿದ್ಯುತ್‌ ವಿತರಣಾ ಕಂಪನಿಗಳಿಗೆ ಗ್ರಾಹಕರು ವಿದ್ಯುತ್‌ ಬಳಸಿದ ಬಳಿಕ ಶುಲ್ಕ ಪಾವತಿಸುತ್ತಿದ್ದಾರೆ. ಸ್ಮಾರ್ಟ್‌ ಮೀಟರ್‌ಗಳಿಂದಾಗಿ ವಿದ್ಯುತ್‌ ಕಂಪನಿಗಳಿಗೆ ಮೊದಲೇ ಹಣ ಸಿಗುತ್ತದೆ. ಇನ್ನು ಬಡ ಗ್ರಾಹಕರಿಗೂ ಸ್ಮಾರ್ಟ್‌ ಮೀಟರ್‌ನಿಂದ ಭಾರಿ ಉಳಿತಾಯವಾಗುತ್ತದೆ. ವಿದ್ಯುತ್‌ ಬಳಸಲಿ, ಬಿಡಲಿ 30 ದಿನಗಳ ಕನಿಷ್ಠ ಶುಲ್ಕವನ್ನು ಈಗ ಕಟ್ಟಲೇಬೇಕಿದೆ. ಹೊಸ ಮೀಟರ್‌ನಿಂದಾಗಿ ಎಷ್ಟುದಿನ ಅಥವಾ ಎಷ್ಟುಗಂಟೆ ವಿದ್ಯುತ್‌ ಬಳಸುತ್ತೀರೋ ಅಷ್ಟಕ್ಕೆ ಹಣ ಕಡಿತಗೊಳ್ಳುತ್ತದೆ ಎಂದು ಸಚಿವರು ದೆಹಲಿ ಮೂಲದ ಆಂಗ್ಲ ಪತ್ರಿಕೆಯೊಂದಕ್ಕೆ ಮಾಹಿತಿ ನೀಡಿದ್ದಾರೆ.

click me!