ಏನ್ ಕೆಲ್ಸ ಮಾಡ್ತಾ ಇದ್ದಿರೋ ಏನೋ?... ನನ್ನ ಮರ್ಯಾದೆಯಂತೂ ಹಾಳು ಮಾಡಿದ್ರಿ... ಹೀಗೆಂದು ಬೆಸ್ಕಾಂ ಅಧಿಕಾರಿಗಳನ್ನು ಸಿಟ್ಟಿನಿಂದ ತೀವ್ರವಾಗಿ ತರಾಟೆಗೆ ತೆಗೆದುಕೊಂಡವರು ಇಂಧನ ಸಚಿವ ಡಿ.ಕೆ. ಶಿವಕುಮಾರ್.
ಬೆಂಗಳೂರು (ಜೂ.02): ಏನ್ ಕೆಲ್ಸ ಮಾಡ್ತಾ ಇದ್ದಿರೋ ಏನೋ?... ನನ್ನ ಮರ್ಯಾದೆಯಂತೂ ಹಾಳು ಮಾಡಿದ್ರಿ... ಹೀಗೆಂದು ಬೆಸ್ಕಾಂ ಅಧಿಕಾರಿಗಳನ್ನು ಸಿಟ್ಟಿನಿಂದ ತೀವ್ರವಾಗಿ ತರಾಟೆಗೆ ತೆಗೆದುಕೊಂಡವರು ಇಂಧನ ಸಚಿವ ಡಿ.ಕೆ. ಶಿವಕುಮಾರ್.
ಶುಕ್ರವಾರ ತಮ್ಮ ನಿವಾಸದಲ್ಲಿ ಕರೆದಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಚಿವ ಶಿವಕುಮಾರ್, ಮಳೆ ಬಂದಾಗ ಎಷ್ಟು ಸಮಸ್ಯೆಗಳಿಗೆ ಸ್ಪಂದಿಸಿದ್ದೀರಿ ಎಂಬ ಬಗ್ಗೆ ಲೆಕ್ಕ ಕೊಡಿ. ಮುಖ್ಯಮಂತ್ರಿಗಳು ನಡೆಸುತ್ತಿದ್ದ ಪತ್ರಿಕಾಗೋಷ್ಠಿಯಲ್ಲಿ ಕರೆಂಟ್ ಹೋಯಿತು. ಇದರಿಂದ ನನ್ನ ಮರ್ಯಾದೆ ಹೋಯಿತು ಎಂದು ಹರಿಹಾಯ್ದರು.
ಇತ್ತೀಚೆಗೆ ಸುರಿದ ಮಳೆಯಿಂದ ವಿದ್ಯುತ್ ಸಮಸ್ಯೆ ಎದುರಾದಾಗ ಯಾವ್ಯಾವ ಅಧಿಕಾರಿಗಳು ಎಷ್ಟು ಜನ ಕರೆ ಸ್ವೀಕರಿಸಿ, ಎಷ್ಟು ಸಮಸ್ಯೆ ನಿವಾರಣೆ ಮಾಡಿದಿರಿ ಎಂಬ ಬಗ್ಗೆ ಎಲ್ಲರೂ ಲೆಕ್ಕ ಕೊಡಿ ಎಂದು ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಸರಿಯಾದ ಮಾಹಿತಿ ನೀಡದ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಬರುವ ಸೋಮವಾರದಿಂದ ಆರಂಭವಾಗುವ ವಿಧಾನ ಮಂಡಳದ ಅಧಿವೇಶನ ವೇಳೆ ವಿದ್ಯುತ್ ಕಡಿತ ಆಗದಂತೆ ಎಚ್ಚರಿಕೆಯಿಂದ ಇರಬೇಕು. ಕಲಾಪದ ವೇಳೆ ಏನಾದರೂ ಹೆಚ್ಚು ಕಡಿಮೆಯಾದರೆ ನಾನು ಸುಮ್ಮನಿರಲ್ಲ ಎಂದು ಖಡಕ್ ಆಗಿ ಅಧಿಕಾರಿಗಳಿಗೆ ಹೇಳಿದರು.
ಇಂಧನ ಖಾತೆ ಸಾಕಾಗಿದೆ ಎಂದ ಡಿಕೆಶಿ; ಗೃಹ ಖಾತೆಗೆ ಪರೋಕ್ಷ ಬೇಡಿಕೆ?
ಇಂಧನ ಖಾತೆ ನಿಭಾಯಿಸಿ ಸಾಕಾಗಿದೆ. ಖಾತೆ ಜೊತೆ ಜನರ ಸಮಸ್ಯೆಗಳಿಗೂ ಸ್ಪಂದಿಸಬೇಕಾಗಿದೆ ಎಂದಿರುವ ಸಚಿವ ಡಿ.ಕೆ. ಶಿವಕುಮಾರ್, ಪರಮೇಶ್ವರ್ ರಾಜೀನಾಮೆಯಿಂದ ತೆರವಾಗಿರುವ ಗೃಹ ಖಾತೆಯನ್ನು ತಮಗೆ ನೀಡುವುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ.
ಅಲ್ಲದೇ, ಯಾವುದೇ ಖಾತೆ ನೀಡಿದರೂ ಚೆನ್ನಾಗಿ ನಿಭಾಯಿಸುತ್ತಾರೆಂಬ ವಿಶ್ವಾಸ ಮುಖ್ಯಮಂತ್ರಿಗಳು ಹಾಗೂ ಹೈಕಮಾಂಡ್‌ಗೆ ಇದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ತಮ್ಮನ್ನು ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ಬಗ್ಗೆ ಮಾತನಾಡಿದ ಅವರು, ನಾನು ಮೊದಲಿನಿಂದಲೂ ಪಕ್ಷದ ಪರ ಪ್ರಚಾರ ಮಾಡುತ್ತಾ ಬಂದಿದ್ದೇನೆ. ಹೊಸ ಜವಾಬ್ದಾರಿ ಕೊಟ್ಟ ಮೇಲೆ ಮಾಡುತ್ತಿಲ್ಲ. ಹೈಕಮಾಂಡ್ ನನಗೆ ಕೊಟ್ಟಿರುವ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ ಎಂದರು.
ನಾನು ಹೈಕಮಾಂಡ್ ಜೊತೆ ಪ್ರತಿದಿನ ಸಂಪರ್ಕದಲ್ಲಿರುತ್ತೇನೆ, ಈ ಬಗ್ಗೆ ಸಮಯ ಬಂದಾಗ ಮಾತನಾಡುತ್ತೇನೆ ಎಂದು ಸಚಿವ ಶಿವಕುಮಾರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.