ರೆಬೆಲ್ ಸ್ಟಾರ್ ರಾಜಕೀಯ ಜೀವನದ ಏಳು-ಬೀಳು

By Web DeskFirst Published Nov 26, 2018, 10:14 AM IST
Highlights

ಎರಡೂವರೆ ದಶಕದ ರಾಜಕೀಯ ಜೀವನದಲ್ಲಿ ನಾಲ್ಕು ಗೆಲುವು, ಮೂರು ಸೋಲು, ಮೂರು ಬಾರಿ ರಾಜೀನಾಮೆ, ತಲಾ ಒಂದು ಬಾರಿ ಕೇಂದ್ರ-ರಾಜ್ಯ ಸಚಿವ ಹುದ್ದೆ ಅಲಂಕರಿಸಿರುವ ಅವರು ಯಾವತ್ತೂ ಅಧಿಕಾರದ ಹಿಂದೆ ಬಿದ್ದವರಲ್ಲ. 

ಬೆಂಗಳೂರು :  ಚಲನಚಿತ್ರ ಹಾಗೂ ರಾಜಕೀಯ ಎರಡೂ ರಂಗದಲ್ಲೂ ರೆಬೆಲ್ ಸ್ಟಾರ್ ಆಗಿ ಮಿಂಚಿದ್ದ ಜನಪ್ರಿಯ ನಾಯಕ ಅಂಬರೀಷ್ ರಾಜಕೀಯ ಕ್ಷೇತ್ರದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡವರು. ಎರಡೂವರೆ ದಶಕದ ರಾಜಕೀಯ ಜೀವನದಲ್ಲಿ ನಾಲ್ಕು ಗೆಲುವು, ಮೂರು ಸೋಲು, ಮೂರು ಬಾರಿ ರಾಜೀನಾಮೆ, ತಲಾ ಒಂದು ಬಾರಿ ಕೇಂದ್ರ-ರಾಜ್ಯ ಸಚಿವ ಹುದ್ದೆ ಅಲಂಕರಿಸಿರುವ ಅವರು ಯಾವತ್ತೂ ಅಧಿಕಾರದ ಹಿಂದೆ ಬಿದ್ದವರಲ್ಲ. 

ಕಾಂಗ್ರೆಸ್ ಪಕ್ಷದ ಮಟ್ಟಿಗೆ ಒಕ್ಕಲಿಗ ಸಮುದಾಯದ ಪ್ರಬಲ ಶಕ್ತಿ, ಚಿತ್ರರಂಗದ ಪ್ರಖ್ಯಾತಿ ಹಾಗೂ ಜನರೊಂದಿಗಿನ ಒಡನಾಟದಿಂದಾಗಿ ಅಲ್ಪ ಸಮಯದಲ್ಲೇ ಭಾರಿ ಜನಮನ್ನಣೆ ಗಳಿಸಿದ್ದರು. ಆದರೆ, ನೇರ ಹಾಗೂ ನಿಷ್ಠುರವಾಗಿದ್ದ ಅವರು ಎಂದೂ ರಾಜಕೀಯವನ್ನು ಗಂಭೀರವಾಗಿ ನೋಡಿರಲಿಲ್ಲ. ಅವಕಾಶವಾದಿ ರಾಜಕೀಯ ಮಾಡದ ಅವರು ಕಾವೇರಿ ವಿವಾದಕ್ಕಾಗಿ ಎರಡು ಬಾರಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಜಕೀಯವನ್ನು ಗಂಭೀರವಾಗಿ ಪರಿಗಣಿಸಿದ್ದರೆ ಮುಖ್ಯಮಂತ್ರಿಯಾಗುವ ಎಲ್ಲಾ ಅವಕಾಶಗಳೂ ಇತ್ತು ಎಂಬುದು ರಾಜಕೀಯ ತಜ್ಞರ ಅಭಿಪ್ರಾಯ.

ಆದರೆ ಎಂದೂ ಮಂಡ್ಯ ಜನತೆಯ ಭಾವನೆಗಳೊಂದಿಗೆ ರಾಜಿಯಾಗದ ಅವರು ಕಾಂಗ್ರೆಸ್ ಹೈಕಮಾಂಡನ್ನೂ ಎದುರು ಹಾಕಿಕೊಂಡು ರಾಜಕೀಯದಲ್ಲೂ ರೆಬೆಲ್ ಆಗಿಯೇ ಗುರುತಿಸಿಕೊಂಡರು. ಸೋಲಿನಿಂದಲೇ ರಾಜಕೀಯ ಪಯಣ ಆರಂಭಿಸಿದ ಅವರು, 2007 ರಲ್ಲಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಸತತವಾಗಿ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಸೋಲುಂಡರು. ಬಳಿಕ ಫೀನಿಕ್ಸ್‌ನಂತೆ
ಮೇಲೆದ್ದ ಅವರು 2013 ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ವಸತಿ ಸಚಿವರಾದರು. ಕೊನೆ ಕೊನೆಗೆ ರಾಜಕೀಯ ಜೀವನದ ಬಗ್ಗೆ ಆಸಕ್ತಿ ಕಳೆದುಕೊಂಡರು. 2018 ರ ಚುನಾವಣೆಯಲ್ಲಿ ಮನೆ ಬಾಗಿಲಿಗೆ ಕಾಂಗ್ರೆಸ್‌ನ ಬಿ-ಫಾರಂ ಹುಡುಕಿಕೊಂಡು ಬಂದರೂ ಚುನಾವಣೆಗೆ ಸ್ಪರ್ಧಿಸಲಿಲ್ಲ.

ವರದಿ :  ಶ್ರೀಕಾಂತ್ ಎನ್. ಗೌಡಸಂದ್ರ

ಅಂಬರೀಷ್ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

click me!