
ಭೋಪಾಲ್(ಆ.28): ಅದೊಂದು ಶಾಲೆ.. ಅಲ್ಲಿ 400 ಮಕ್ಕಳು ಇರುತ್ತಾರೆ. ಏಕಾಏಕಿ ಶಾಲೆಯ ಆವರಣದಲ್ಲಿ ಬಾಂಬ್ ರೀತಿಯ ವಸ್ತುವೊಂದು ಕಾಣುತ್ತದೆ. ಇದನ್ನು ಕಂಡು ಮಕ್ಕಳು ಹೌಹಾರುತ್ತಾರೆ. ವಿಷಯ ತಿಳಿದ ಪೊಲೀಸರು ಆಲ್ಲಿಗೆ ಆಗಮಿಸುತ್ತಾರೆ. ಆಗ ಅವರಲ್ಲಿದ್ದ ಓರ್ವ ಪೊಲೀಸ್ ಪೇದೆ ಬಾಂಬ್ ಹೊತ್ತು 1 ಕಿ.ಮೀ. ಓಡಿ ಅದನ್ನು ಎಸೆಯುತ್ತಾನೆ. ಆಗ ಮಕ್ಕಳೆಲ್ಲ ಬಚಾವಾಗುತ್ತಾರೆ. ಪ್ರಾಣ ರಕ್ಷಿಸಿದ ಪೇದೆಗೆ ಜೈಕಾರ ಹಾಕುತ್ತಾರೆ.. - ಇದೇನು ಸಿನಿಮಾ ಕತೆಯಲ್ಲ ಅಥವಾ ಶೂಟಿಂಗ್ ದೃಶ್ಯವಲ್ಲ. ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದ ನೈಜ ಘಟನೆ.
ಈ ಸಾಹಸಮಯ ದೃಶ್ಯವನ್ನು ಯಾರೋ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಅದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಸಾಗರ್ ಬಳಿಯ ಚಿತೋರಾ ಗ್ರಾಮದ ಶಾಲೆಯೊಂದರಲ್ಲಿ ಇತ್ತೀಚೆಗೆ ಏಕಾಏಕಿ 10 ಕೇಜಿ ತೂಕದ ಬಾಂಬ್ ಒಂದು ಕಂಡುಬರುತ್ತದೆ. ಕೂಡಲೇ ಶಾಲೆಯವರು ಪೊಲೀಸರಿಗೆ ಫೋನ್ ಮಾಡಿದ್ದಾರೆ.
ಸಾಗರ್‌ನ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ. ಅಷ್ಟರಲ್ಲಿ ಶಾಲೆಯೊಳಗೆ ಇದ್ದ 400 ಮಕ್ಕಳು ಹೌಹಾರಿ ಅಳಲು, ಚೀರಲು ಆರಂಭಿಸಿದ್ದಾರೆ. ಕೂಡಲೇ ಅಲ್ಲಿಗೆ ಬಂದಿದ್ದ ಪೊಲೀಸ್ ತಂಡದಲ್ಲಿ ಇದ್ದ ಮುಖ್ಯ ಪೇದೆ ಅಭಿಷೇಕ್ ಪಟೇಲ್, ಎಂಟೆದೆ ಭಂಟನಂತೆ ಬಾಂಬನ್ನು ಕೈಗೆತ್ತಿಕೊಂಡಿದ್ದಾರೆ. 10 ಕೇಜಿ ತೂಕದ ಈ ಬಾಂಬನ್ನು ಹೊತ್ತು ವೇಗವಾಗಿ ಓಡಲು ಆರಂಭಿಸಿದ್ದಾರೆ. 1 ಕಿಲೋಮೀಟರ್ ದೂರ ಹೋಗಿ ನಿರ್ಜನ ಪ್ರದೇಶದಲ್ಲಿ ಬಾಂಬ್ ಇಟ್ಟು, ಅದು ಸ್ಫೋಟಗೊಂಡರೂ ಯಾವುದೇ ಅಪಾಯವಾಗದಂತೆ ನೋಡಿಕೊಂಡಿದ್ದಾರೆ.
‘
ನಾನು ಈ ಹಿಂದೆ ಬಾಂಬ್ ನಿಷ್ಕ್ರಿಯ ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡು ತರಬೇತಿ ಪಡೆದಿದ್ದೆ. ಅಲ್ಲೂ ಇದೇ ಮಾದರಿಯ ಬಾಂಬ್ ಇಡಲಾಗಿತ್ತು. ಅದನ್ನು ಇದೇ ರೀತಿ ಹೊತ್ತುಕೊಂಡು ಓಡಿದ್ದೆ. ಈಗ ಅದು ನೆರವಿಗೆ ಬಂತು’ ಎಂದು ಅಭಿಷೇಕ್ ಪಟೇಲ್ ಅನುಭವ ಹಂಚಿಕೊಂಡಿದ್ದಾರೆ. ಪಟೇಲ್ ಸಾಹಸಕ್ಕೆ ಮೆಚ್ಚಿ ಪೊಲೀಸ್ ಮಹಾನಿರೀಕ್ಷಕರು ಬಹುಮಾನ ಪ್ರಕಟಿಸಿದ್ದಾರೆ. ಈ ಶಾಲೆ ಸೇನಾ ಶೂಟಿಂಗ್ ರೇಂಜ್‌ನ ಸನಿಹದಲ್ಲಿ ಇದ್ದು, ಅಲ್ಲಿಂದ ಬಿದ್ದ ಬಾಂಬ್ ಇದಾಗಿರಬಹುದು ಎಂದು ಶಂಕಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.