
ರೋಹ್ಟಕ್(ಆ. 28): ಅತ್ಯಾಚಾರ ಪ್ರಕರಣಗಳ ದೋಷಿ ಬಾಬಾ ರಾಮ್ ರಹೀಮ್ ಸಿಂಗ್ 20 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ. ಇಬ್ಬರು ಸಾಧ್ವಿಗಳನ್ನ ರೇಪ್ ಮಾಡಿದ ಅಪರಾಧಕ್ಕಾಗಿ ಬಾಬಾಗೆ ತಲಾ 10 ವರ್ಷ ಶಿಕ್ಷೆ ವಿಧಿಸಲಾಗಿದೆ. ಸಿಬಿಐ ವಿಶೇಷ ಕೋರ್ಟ್'ನ ನ್ಯಾಯಮೂರ್ತಿ ಜಗದೀಪ್ ಸಿಂಗ್ ಅವರು ಸೋಮವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದರು. ರಾಮ್ ರಹೀಮ್ ಸಿಂಗ್'ಗೆ 10 ವರ್ಷದ ಎರಡು ಅವಧಿಯ ಕಠಿಣ ಕಾರಾಗೃಹವಾಸದ ಶಿಕ್ಷೆ ಹಾಗೂ 65 ಸಾವಿರ ರೂ ದಂಡ ವಿಧಿಸಿದರು. ಅತ್ಯಾಚಾರ ಎಸಗಿದ್ದಕ್ಕೆ 50 ಸಾವಿರ ರೂ, ಕೊಲೆಯತ್ನಕ್ಕಾಗಿ 10 ಸಾವಿರ ರೂ ಹಾಗೂ ಬೆದರಿಕೆಗಾಗಿ 5 ಸಾವಿರ ರೂ ದಂಡ ವಿಧಿಸಿದರು.
ಈ ಮೊದಲು ಗುರ್ಮೀತ್ ರಾಮ್ ರಹೀಮ್'ಗೆ 10 ವರ್ಷ ಜೈಲುಶಿಕ್ಷೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಆದರೆ, ಎರಡು ರೇಪ್ ಪ್ರಕರಣಗಳಲ್ಲೂ ಬಾಬಾ ಅಪರಾಧಿ ಎಂಬುದು ಸಾಬೀತಾಗಿತ್ತು. ಕೆಲ ಬಾರಿ ಎರಡೂ ಪ್ರಕರಣಗಳ ಶಿಕ್ಷೆಯನ್ನು ಒಟ್ಟೊಟ್ಟಿಗೆ ಅನುಭವಿಸುವಂತೆ ಆದೇಶಿಸಲಾಗುತ್ತದೆ. ಕೆಲವೊಮ್ಮೆ ಒಂದು ಶಿಕ್ಷೆಯ ಬಳಿಕ ಇನ್ನೊಂದು ಶಿಕ್ಷೆ ಚಾಲನೆಗೆ ಬರುತ್ತದೆ. ಇಲ್ಲಿ ರಾಮ್ ರಹೀಮ್ ಕೂಗ ಒಂದು ಪ್ರಕರಣದ 10 ವರ್ಷ ಜೈಲುಶಿಕ್ಷೆ ಬಳಿಕ ಇನ್ನೊಂದು ಪ್ರಕರಣದಲ್ಲಿ ಇನ್ನೂ 10 ವರ್ಷ ಸೆರೆಮನೆವಾಸ ಅನುಭವಿಸುವಂತೆ ನ್ಯಾಯಮೂರ್ತಿಗಳು ಆದೇಶ ನೀಡಿದ್ದಾರೆ.
ಈ ಐತಿಹಾಸಿಕ ತೀರ್ಪಿಗಾಗಿ ರೋಹ್ಟಕ್ ಜೈಲಿನ ಲೈಬ್ರರಿಯನ್ನೇ ಕೋರ್ಟ್ ಹಾಲ್ ಆಗಿ ಪರಿವರ್ತಿಸಲಾಗಿತ್ತು. ಈ ವಿಶೇಷ ಕೋರ್ಟ್ ಹಾಲ್'ನಲ್ಲಿ ನ್ಯಾಯಮೂರ್ತಿಗಳೂ ಒಳಗೊಂಡಂತೆ ಕೇವಲ 9 ಮಂದಿಗೆ ಮಾತ್ರ ಪ್ರವೇಶ ನೀಡಲಾಗಿತ್ತು. ಅಲ್ಲದೇ, ಉಭಯ ಪಕ್ಷಗಳ ವಕೀಲರಿಗೆ ತಮ್ಮ ವಾದ ಮಂಡಿಸಲು ಕೇವಲ 10 ನಿಮಿಷ ಕಾಲಾವಕಾಶ ನೀಡಲಾಗಿತ್ತು.
ಕಳೆದ ಶುಕ್ರವಾರದಂದು ಸಿಬಿಐ ಕೋರ್ಟ್ ನ್ಯಾಯಾಧೀಶರು ಡೇರಾ ಸಚ್ಚಾ ಸೌಧಾ ಸಂಸ್ಥೆಯ ಸ್ವಘೋಷಿತ ದೇವಮಾನವನ್ನು ಅತ್ಯಾಚಾರ ಅಪರಾಧಿ ಎಂದು ತೀರ್ಪು ನೀಡಿತ್ತು. 15 ವರ್ಷಗಳ ಹಿಂದಿನ ಪ್ರಕರಣವು ಬಾಬಾ ಶಿಕ್ಷೆಯಲ್ಲಿ ಪರ್ಯಾವಸಾನಗೊಂಡಿದೆ.
ಎರಡು ದಶಕಗಳ ಕಾಲ ವಿಲಕ್ಷಣ ರೀತಿಯಲ್ಲಿ ಅಟ್ಟಹಾಸ ಮಾಡುತ್ತಾ ಬಂದಿದ್ದ ಗುರ್ಮೀತ್ ಬಾಬಾ ಇಂದು ಕೋರ್ಟ್ ಮುಂದೆ ಬಿಕ್ಕಿಬಿಕ್ಕಿ ಅತ್ತ ಘಟನೆ ನಡೆಯಿತು. ತನಗೆ ವಿನಾಯಿತಿ ನೀಡುವಂತೆ ನ್ಯಾಯಾಧೀಶರನ್ನು ಪರಿಪರಿಯಾಗಿ ಬೇಡಿಕೊಂಡರೆನ್ನಲಾಗಿದೆ.
ಇದೇ ವೇಳೆ, ಅತ್ಯಾಚಾರ ಸಂತ್ರಸ್ತೆ ಸಾಧ್ವಿಯು ನ್ಯಾಯಾಲಯದ ತೀರ್ಪಿನಿಂದ ಸಂಪೂರ್ಣ ಸಂತುಷ್ಟರಾಗಲಿಲ್ಲ. ಬಾಬಾಗೆ 10 ವರ್ಷ ಜೈಲುಶಿಕ್ಷೆ ಕಡಿಮೆಯಾಯಿತು; ಜೀವಾವಧಿ ಶಿಕ್ಷೆಯಾದರೂ ಕೊಡಿ ಎಂದು ಆ ಮಹಿಳೆ ಬೇಡಿಕೊಂಡರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.