ಬಕ್ರೀದ್ ಹಬ್ಬದಂದು ಮೂಡಿಗೆರೆಯಲ್ಲಿ ಗಣೇಶೋತ್ಸವ; ಪೊಲೀಸ್ ಬಿಗಿಭದ್ರತೆ

By Suvarna Web DeskFirst Published Aug 31, 2017, 6:15 PM IST
Highlights

"ಮುಸ್ಲಿಮರು ತಮ್ಮ ಪಾಡಿಗೆ ಬ್ರಕೀದ್ ಹಬ್ಬ ಆಚರಣೆ ಮಾಡುತ್ತಾರೆ. ಗಣೇಶೋತ್ಸವವನ್ನೂ ಹಿಂದೂಗಳು ಆಚರಣೆ ಮಾಡುತ್ತಾರೆ. ಇದರಲ್ಲಿ ಯಾವುದೇ ಗೊಂದಲಗಳು ಉಂಟಾಗಬಾರದು ಎಂದು ಪೊಲೀಸ್ ಇಲಾಖೆ ಹೆಚ್ಚಿನ ಬಿಗಿ ಭದ್ರತೆಯನ್ನು ಕೈಗೊಂಡಿದೆ" ಎಂದು ಎಸ್ಪಿ ಅಣ್ಣಾಮಲೈ ತಿಳಿಸಿದ್ದಾರೆ.

ಚಿಕ್ಕಮಗಳೂರು(ಆ. 31): ಇಲ್ಲಿಯ ಮೂಡಿಗೆರೆಯಲ್ಲಿ ನಾಳೆ, ಶುಕ್ರವಾರ ನಡೆಯಲುದ್ದೇಶಿಸಿರುವ ಗಣೇಶೋತ್ಸವ ಕಾರ್ಯಕ್ರಮದತ್ತ ಎಲ್ಲರ ಚಿತ್ತ ನೆಟ್ಟಿದೆ. ಬಕ್ರೀದ್ ಹಬ್ಬದ ದಿನ ನಡೆಯಲಿರುವ ಗಣೇಶೋತ್ಸವಕ್ಕೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಮುಂಜ್ರಾಗತಾ ಕ್ರಮ  ತೆಗೆದುಕೊಂಡಿದೆ. ನಾಳೆ ಯಾವುದೇ ರೀತಿಯಲ್ಲಿ ಅವಘಡಕ್ಕೆ ಆಸ್ಪದ ಕೊಡುವುದಿಲ್ಲವೆಂದು ಎಸ್'ಪಿ ಅಣ್ಣಾಮಲೈ ಹೇಳಿದ್ದಾರೆ.

"ಮುಸ್ಲಿಮರು ತಮ್ಮ ಪಾಡಿಗೆ ಬ್ರಕೀದ್ ಹಬ್ಬ ಆಚರಣೆ ಮಾಡುತ್ತಾರೆ. ಗಣೇಶೋತ್ಸವವನ್ನೂ ಹಿಂದೂಗಳು ಆಚರಣೆ ಮಾಡುತ್ತಾರೆ. ಇದರಲ್ಲಿ ಯಾವುದೇ ಗೊಂದಲಗಳು ಉಂಟಾಗಬಾರದು ಎಂದು ಪೊಲೀಸ್ ಇಲಾಖೆ ಹೆಚ್ಚಿನ ಬಿಗಿ ಭದ್ರತೆಯನ್ನು ಕೈಗೊಂಡಿದೆ. ಹೆಚ್ಚುವರಿ ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ಪೊಲೀಸರನ್ನು ಈಗಾಗಲೇ ಪಟ್ಟಣದಲ್ಲಿ  ನಿಯೋಜನೆ ಮಾಡಲಾಗಿದೆ. ಯಾರು ಎಲ್ಲಿಗೆ ಬೇಕಾದರೂ ಹೋಗಬಹುದು. ಅದಕ್ಕೆ ನಿರ್ಬಂಧವಿಲ್ಲ. ಆದರೆ, ಮಾಡುವ ಭಾಷಣದ ಮೇಲಷ್ಟೇ ನಿರ್ಬಂಧ ಹೇರಲಾಗಿದ್ದು  ಆಯೋಜಕರ ಜೊತೆಗೆ ಈಗಾಗಲೇ ಚರ್ಚೆ ಮಾಡಲಾಗಿದೆ" ಎಂದು ಎಸ್ಪಿ ಅಣ್ಣಾಮಲೈ ತಿಳಿಸಿದ್ದಾರೆ. ಗಣೇಶೋತ್ಸವದ ಆಯೊಜಕರು 10 ಕಿಮೀ ಬೈಕ್ ರ್ಯಾಲಿಗೆ ಅವಕಾಶ ಕೋರಿದ್ದರು. ಆದ್ರೆ ಭದ್ರತೆ ದೃಷ್ಟಿಯಿಂದ 700 ಮೀಟರ್ ಬೈಕ್ ರ್ಯಾಲಿಗೆ ಮಾತ್ರ ಅವಕಾಶ ನೀಡಲಾಗಿದೆ. ಅದಕ್ಕೆ ಹಿಂದೂಗಳು ಒಪ್ಪಿಕೊಂಡಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.

ಮೊನ್ನೆ, ಬೆಂಗಳೂರಿನ ಕೋಮುಸೂಕ್ಷ್ಮ ಪ್ರದೇಶವೆನಿಸಿದ ಶಿವಾಜಿನಗರದಲ್ಲೂ ಅದ್ದೂರಿಯಾಗಿ ಗಣೇಶೋತ್ಸವ ಆಚರಿಸಲಾಗಿತ್ತು. ಯಾವುದೇ ಅವಘಡವಾಗದಂತೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು. ಖಡಕ್ ಅಧಿಕಾರಿ ಎನಿಸಿರುವ ಎಸ್'ಪಿ ಅಣ್ಣಾಮಲೈ ನೇತೃತ್ವದಲ್ಲಿ ಚಿಕ್ಕಮಗಳೂರಿನ ಪೊಲೀಸರು ನಾಳೆ ಯಾವುದೇ ದುರ್ಘಟನೆಗೆ ಆಸ್ಪದ ಕೊಡದಂತೆ ವ್ಯವಸ್ಥೆ ಮಾಡುವ ನಿರೀಕ್ಷೆಯಂತೂ ಇದೆ.

ವರದಿ: ಕಿರಣ್ ಕೆ., ಸುವರ್ಣನ್ಯೂಸ್, ಚಿಕ್ಕಮಗಳೂರು

click me!