ಸ್ಮಾರ್ಟ್ ಸಿಟಿ, ಅಮೃತ್ ಸಿಟಿ ಯೋಜನೆಗಳಿಗೆ ಶೇ. 50ರಷ್ಟು ಹಣ ನಮ್ಮದು; ಹೆಸರು ಮಾತ್ರ ಕೇಂದ್ರ ಸರ್ಕಾರದ್ದು:ಸಿಎಂ

By Suvarna Web DeskFirst Published Aug 31, 2017, 6:14 PM IST
Highlights

ಸ್ಮಾರ್ಟ್ ಸಿಟಿ, ಅಮೃತ್ ಸಿಟಿ ಯೋಜನೆಗಳಿಗೆ ಶೇಕಡಾ 50ರಷ್ಟು ಹಣವನ್ನ ನಾವು ಕೊಡ್ತೀವಿ, ಆದರೆ ಹೆಸರು ಮಾತ್ರ ಕೇಂದ್ರ ಸರ್ಕಾರದ್ದು ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಆ.31): ಸ್ಮಾರ್ಟ್ ಸಿಟಿ, ಅಮೃತ್ ಸಿಟಿ ಯೋಜನೆಗಳಿಗೆ ಶೇಕಡಾ 50ರಷ್ಟು ಹಣವನ್ನ ನಾವು ಕೊಡ್ತೀವಿ, ಆದರೆ ಹೆಸರು ಮಾತ್ರ ಕೇಂದ್ರ ಸರ್ಕಾರದ್ದು ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿಂದು ನಡೆದ ನಗರೋತ್ಥಾನ ಯೋಜನೆಯ ಮೂರನೇ ಹಂತದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ, ನಗರೋತ್ಥಾನ ಯೋಜನೆ 2009-10ರಲ್ಲೇ ಆರಂಭವಾಗಿದ್ದರೂ ಕೂಡ ಈ ಯೋಜನೆಗೆ ವೇಗ ಸಿಕ್ಕಿದ್ದು ನಮ್ಮ ಸರ್ಕಾರ ಬಂದ ಮೇಲೆ ಅಂತ ಬೆನ್ನು ತಟ್ಟಿಕೊಂಡರು. ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಯೋಜನೆಯ ಬಗ್ಗೆ ಕೂಡ ಅಪಸ್ವರ ಎತ್ತಿದ ಸಿಎಂ ಈಗಿನ ಕೇಂದ್ರ ಸರ್ಕಾರ ಹೆಸರು ಮಾತ್ರ ಬದಲಾಯಿಸಿದೆ ಅಷ್ಟೇ, ಮೊದಲು ನಿರ್ಮಲ ಭಾರತ ಎಂದಿದ್ದ ಹೆಸರನ್ನ ಸ್ವಚ್ಛ ಭಾರತ ಅಂತ ಬದಲಿಸಿದೆಯಷ್ಟೇ. ರಾಜ್ಯದ 277 ಸ್ಥಳೀಯ ಸಂಸ್ಥೆಗಳು ಬಯಲು ಬಹಿರ್ದೆಸೆ ಮುಕ್ತ ಆಗಬೇಕು ಅನ್ನೊದು ರಾಜ್ಯ ಸರ್ಕಾರದ ಉದ್ದೇಶವಾಗಿದ್ದು, ಈ ವರ್ಷ 100 ಸ್ಥಳೀಯ ಸಂಸ್ಥೆಗಳ ಬಯಲು ಬಹಿರ್ದೆಸೆ ಮುಕ್ತ ಮಾಡುವ ಉದ್ದೇಶವಿದೆ ಎಂದು ಹೇಳಿದರು. ನಾವು ಚಿಕ್ಕವರಿದ್ದಾಗ ಬೆಳಗ್ಗೆ ಎದ್ದರೆ ತಂಬಿಗೆ ಹಿಡಿದು ಹೋಗುತ್ತಿದ್ದೇವು ಎಂದ ಸಿಎಂ, ಇಲ್ಲಿ ವೇದಿಕೆ ಮೇಲಿರುವವರ ಪೈಕಿಯೂ ಬಹಳಷ್ಟು ಮಂದಿ ಬಯಲಿಗೆ ಹೋದವರಿದ್ದಾರೆ ಅಂದಾಗ ಸಭಿಕರು ನಗೆಗಡಲಲ್ಲಿ ತೇಲಿದರು. 

ನಗರೋತ್ಥಾನ ಯೋಜನೆಯ ಮೂಲಕ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಿದ್ದು, ಇದಕ್ಕಾಗಿ 3ನೇ ಹಂತದ ಯೋಜನೆಯಲ್ಲಿ 2900 ಕೋಟಿ ರೂಪಾಯಿ ಮೀಸಲಿಟ್ಟಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.  ಈ ವೇಳೆ ವೇದಿಕೆ ಮೇಲೆ ಕುಳಿತಿದ್ದ ಕೋನರೆಡ್ಡಿ, 4ನೇ ಹಂತದ ಯೋಜನೆಯನ್ನೂ ಜಾರಿಗೆ ತನ್ನಿ ಎಂದಾಗ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, 4ನೇ ಹಂತ ಹಾಗೂ 5ನೇ ಹಂತದ ಯೋಜನೆಯನ್ನೂ ಜಾರಿಗೆ ತರ್ತೀವಿ, ಆದರೆ ನಿಮ್ಮ ಮಾತು, ನೀನು ತಂದು ಹಾಕು ನಾನು ತಿಂದು ಹಾಕ್ತೀನಿ ಅಂತ ಹೆಂಡತಿ ತನ್ನ ಗಂಡನಿಗೆ ಹೇಳಿದಂತಿದೆ ಅಂತ ಕೋನರೆಡ್ಡಿಗೆ ಟಾಂಗ್ ನೀಡಿದರು.   

click me!