
ಚಿಕ್ಕಬಳ್ಳಾಪುರ: ಇದು ಒಂದು ರೀತಿಯಲ್ಲಿ ಕೊಟ್ಟವನು ಕೋಡಂಗಿ ಇಸ್ಕೊಂಡವನು ಈರಭದ್ರ ಎನ್ನುವ ಕತೆಯನ್ನು ನೆನಪಿಸುವ ಪ್ರಸಂಗ! ಆದರೆ, ಈ ಪ್ರಸಂಗದಲ್ಲಿ ಇಸ್ಕೊಂಡವರು ಪೊಲೀಸರು. ಇಡೀ ಪ್ರಕರಣವನ್ನು ನಿಭಾಯಿಸಿದ ರೀತಿ ನೋಡಿದಾಗ ಕೊಟ್ಟವರಿಗೆ ಮಾತ್ರ ಎಲ್ಲೋ ಈಗ ತಾನು ಈ ಪ್ರಸಂಗದಲ್ಲಿ ಕೋಡಂಗಿಯಾದೆನಾ ಎನ್ನುವ ಅನುಮಾನ ಹುಟ್ಟುವಂತೆ ಮಾಡಿದೆ.
ಕೋತಿ ಹಿಡಿದಿದ್ದ ಪ್ಲಾಸ್ಟಿಕ್ ಕವರ್'ನಲ್ಲಿ ರೂ.3 ಲಕ್ಷ ಇರುವುದನ್ನು ತಿಳಿದ ರೈತರೊಬ್ಬ ಅದನ್ನು ಪೊಲೀಸ್ ಠಾಣೆಗೆ ತಿಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಆದರೆ, ಆ ಹಣ ತನ್ನದೇ ಎಂದು ಹೇಳಿ ಆ ಠಾಣೆಯ ಎಎಸ್ಸೈವೊಬ್ಬರು ಹಣ ಪಡೆದು, ಕಾರು ಖರೀದಿಸಿದ್ದಾರೆ. ನಿಜವಾಗಲೂ ಹಣ ಆ ಎಎಸ್ಸೈಗೆ ಸೇರಿದ್ದೇ? ಹೌದೇ ಆದರೆ ಆ ಹಣ ಕೋತಿ ಕೈಗೆ ಹೇಗೆ ಬಂತು ಎನ್ನುವ ಅನುಮಾನ ಪ್ರಶ್ನೆಗೆ ಇನ್ನೂ ಸಮರ್ಪಕ ಉತ್ತರ ಸಿಕ್ಕಿಲ್ಲ.
ಆಗಿದ್ದೇನು?: ಚಿಂತಾಮಣಿ ತಾಲೂಕಿನ ಬಂಡಕೋಟೆ ಗ್ರಾಮದ ಶ್ರೀರಾಮರೆಡ್ಡಿ ಎಂಬ ರೈತ, ಪ್ರಕರಣವೊಂದರ ಮಾಹಿತಿ ಪಡೆಯಲು ಪರಿಚಿತ ಹುಡುಗನೊಂದಿಗೆ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಗೆ ನ.10ರಂದು ತೆರಳಿದ್ದಾರೆ. ಠಾಣೆಗೆ ಹೋಗುವ ಮುನ್ನ ಪಟ್ಟಣದಲ್ಲಿ ಮನೆಗೆಂದು ತರಕಾರಿ ಖರೀದಿಸಿ ಅವನ್ನು ಕಪ್ಪು ಪ್ಲಾಸ್ಟಿಕ್ ಕವರ್'ನಲ್ಲಿ ಹಾಕಿಕೊಂಡು ಠಾಣೆ ಬಳಿ ಬಂದಿದ್ದಾರೆ. ಠಾಣೆ ಒಳಕ್ಕೆ ಈ ಕಪ್ಪು ಪ್ಲಾಸ್ಟಿಕ್ ತೆಗೆದುಕೊಂಡು ಹೋಗುವುದು ಸರಿಯಲ್ಲ ಎಂದು ತೀರ್ಮಾನಿಸಿ ಅದನ್ನು ಠಾಣೆ ಎದುರಿಗಿದ್ದ ಬೈಕ್‌ವೊಂದರ ಮೇಲೆ ಇಟ್ಟು ಒಳಹೋಗಿದ್ದಾರೆ. ಸಬ್‌ಇನ್ಸ್‌ಪೆಕ್ಟರ್ ಇಲ್ಲ ಎಂದು ಎಎಸ್ಸೈ ತಿಳಿಸಿದ್ದರಿಂದ ಠಾಣೆಯಿಂದ ಹೊರಬಂದಿದ್ದಾರೆ. ಅಷ್ಟರಲ್ಲೇ ಕೋತಿಯೊಂದು ಠಾಣೆ ಆವರಣದಲ್ಲಿ ಕಪ್ಪು ಪ್ಲಾಸ್ಟಿಕ್ ಕವರ್ ಹಿಡಿದಿರುವುದು ಶ್ರೀರಾಮರೆಡ್ಡಿ ಕಣ್ಣಿಗೆ ಬಿತ್ತು. ಅದು ತಮ್ಮದೇ ತರಕಾರಿ ಚೀಲ ಎಂದು ಭಾವಿಸಿದ ರೆಡ್ಡಿ ಹರಸಾಹಸಪಟ್ಟು ಕೋತಿಯಿಂದ ಆ ಚೀಲ ಬಿಡಿಸಿಕೊಂಡಿದ್ದಾರೆ.
ಬಿಡಿಸಿ ನೋಡುವ ಮೊದಲೇ ಗ್ರಾಮಕ್ಕೆ ಹೋಗುವ ಬಸ್ ಬಂದಿದ್ದರಿಂದ ತರಾತುರಿಯಲ್ಲಿ ಶ್ರೀರಾಮರೆಡ್ಡಿ ಬಸ್ ಹತ್ತಿದ್ದಾರೆ. ಅಲ್ಲಿಂದ 10 ಕಿ.ಮೀ. ದೂರದಲ್ಲಿರುವ ತಮ್ಮೂರಿನ ಕ್ರಾಸ್‌ನಲ್ಲಿ ಇಳಿದ ಶ್ರೀರಾಮರೆಡ್ಡಿಗೆ ತಾವು ಪಟ್ಟಣದಲ್ಲಿ ಖರೀದಿಸಿದ ತರಕಾರಿ ಇದ್ದ ಚೀಲದ ತೂಕಕ್ಕೂ ಈ ಚೀಲದ ತೂಕಕ್ಕೂ ವ್ಯತ್ಯಾಸವಿರುವುದು ಗಮನಕ್ಕೆ ಬಂದಿದೆ.
ಕವರ್‌ನಲ್ಲಿ ಕಂತೆ ಕಂತೆ ನೋಟು!: ಅನುಮಾನದಿಂದ ಕವರ್ ಬಿಚ್ಚಿ ನೋಡಿದ ಶ್ರೀರಾಮರೆಡ್ಡಿಗೆ ಕ್ಷಣ ಕಾಲ ಅಚ್ಚರಿ. ಯಾಕೆಂದರೆ ಆ ಕವರ್‌ನಲ್ಲಿ ತರಕಾರಿ ಬದಲು ಇದ್ದದ್ದು ನೂರಿನ್ನೂರು ರುಪಾಯಿ ಕೊಟ್ಟು ಖರೀದಿಸಿದ್ದ ತರಕಾರಿ ಬದಲು ಸಾವಿರ, ಐನೂರು ಮುಖಬೆಲೆಯ ಕಂತೆ ಕಂತೆ ನೋಟು.
ಈ ಚೀಲವನ್ನು ಪೊಲೀಸ್ ಠಾಣೆಯ ಆವರಣದಿಂದ ತಂದಿದ್ದರಿಂದ ಸ್ವಲ್ಪ ಆತಂಕವೂ ಇತ್ತು. ಆದರೂ ಆಸೆಗೆ ಬೀಳದೆ, ಪ್ರಾಮಾಣಿಕವಾಗಿ ಈ ವಿಚಾರವನ್ನು ಅದೇ ಠಾಣೆಯ ಎಎಸ್ಸೈಗೆ ಫೋನ್ ಮಾಡಿ ತಿಳಿಸಿದ್ದಾರೆ. ತಕ್ಷಣ ಎಎಸ್ಸೈ, ‘‘ಆ ಹಣ ತಮ್ಮದೆ'' ಎಂದು ತಿಳಿಸಿ, ‘‘ನೀವು ಎಲ್ಲಿದ್ದಿರೋ ಅಲ್ಲೇ ಇರಿ. ನಾನು ಪೇದೆಯೊಬ್ಬರನ್ನು ಕಳಿಸುತ್ತೇನೆ'' ಎಂದು ಉತ್ತರಿಸಿದ್ದಾರೆ.
ಅದರಂತೆ ಶ್ರೀರಾಮರೆಡ್ಡಿ ಮತ್ತು ಅವರ ಜತೆಗೆ ಠಾಣೆಗೆ ಬಂದಿದ್ದ ಸಹಚರ ಊರಿನ ಕ್ರಾಸ್ ಬಳಿಯೇ ನಿಂತಿದ್ದಾರೆ. ಅಲ್ಲಿಗೆ ಬಂದ ಪೇದೆ ‘‘ಹಣವನ್ನು ಠಾಣೆಯಲ್ಲೇ ಕೊಟ್ಟು ಬರುವುದನ್ನು ಬಿಟ್ಟು, ಇಲ್ಲಿವರೆಗೂ ತಂದಿದ್ದೀರಾ'' ಎಂದು ಗದರಿಸಿ, ಜತೆಯಲ್ಲಿದ್ದ ಸಹಚರನ ಕೆನ್ನೆಗೆ ಬಾರಿಸಿದ್ದಾರೆ. ನಂತರ ಹಣ ಎಣಿಸಿದಾಗ ರೂ.1000 ಮುಖಬೆಲೆಯ ಒಂದು ಕಂತೆ ಮತ್ತು ರೂ.500 ಮುಖಬೆಲೆಯ 4 ಕಂತೆ ಸೇರಿ ಒಟ್ಟು ರೂ.3 ಲಕ್ಷ ಇತ್ತು. ‘‘ಹಣ ಸರಿಯಾಗಿದೆ'' ಎಂದು ಹೇಳಿದ ಪೇದೆ ಹಣದೊಂದಿಗೆ ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ.
ಕಾರು ಖರೀದಿಸಿದ ಪೇದೆ!: ಶ್ರೀರಾಮರೆಡ್ಡಿ ಅವರಿಂದ ಪಡೆದ ಹಣ ಪೊಲೀಸ್ ಸಿಬ್ಬಂದಿಯದೇ. ಅದೇ ಹಣದಲ್ಲಿ ಅವರು ಕಾರು ಖರೀದಿಸಿರುವುದಾಗಿ ಸ್ವತಃ ಚಿಂತಾಮಣಿ ಗ್ರಾಮಾಂತರ ವೃತ್ತ ನಿರೀಕ್ಷಕ ಆನಂದ್‌ಕುಮಾರ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ. ಆದರೆ, ಪೇದೆ ಅಷ್ಟುದೊಡ್ಡ ಮೊತ್ತದ ಹಣವನ್ನು ಕೋತಿ ಕೈಗೆ ಸಿಗುವಂತೆ ಎಲ್ಲಿ ಮತ್ತು ಏಕೆ ಇಟ್ಟಿದ್ದರು ಎಂಬ ಪ್ರಶ್ನೆಗೆ ವೃತ್ತ ನಿರೀಕ್ಷಕರ ಬಳಿ ಉತ್ತರವಿಲ್ಲ.
(epaper.kannadaprabha.in)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.