ಮೋದಿ ಮುಂದಿರುವ ಆಡಳಿತಾತ್ಮಕ ಸವಾಲುಗಳೇನು..?

First Published May 26, 2018, 10:55 AM IST
Highlights

ಯಾವುದೇ ಸರ್ಕಾರದ ಮೊದಲಿನ ಕೆಲ ವರ್ಷ ಜನರಿಗೆ ಅನುಕಂಪವಿರುತ್ತದೆ. ಸ್ವಲ್ಪ ಸಮಯ ನೋಡೋಣ ಎಂದು ಕಾಯುತ್ತಾರೆ. ಆದರೆ, ಚುನಾವಣೆಗೆ ಹೋಗುವ ಕೊನೆಯ ವರ್ಷದಲ್ಲಿ ಸರ್ಕಾರದ ಕಾರ್ಯಗಳು ಫಲ ಕೊಡುತ್ತಿರಬೇಕು ಎಂದು ಬಯಸುತ್ತಾರೆ. ಹೀಗಾಗಿ 5 ನೇ ವರ್ಷ ಮೋದಿ ಸರ್ಕಾರದ ಮುಂದಿರುವ ಆಡಳಿತಾತ್ಮಕ ಸವಾಲುಗಳು ದೊಡ್ಡದಿವೆ.  

ನವದೆಹಲಿ : ಯಾವುದೇ ಸರ್ಕಾರದ ಮೊದಲಿನ ಕೆಲ ವರ್ಷ ಜನರಿಗೆ ಅನುಕಂಪವಿರುತ್ತದೆ. ಸ್ವಲ್ಪ ಸಮಯ ನೋಡೋಣ ಎಂದು ಕಾಯುತ್ತಾರೆ. ಆದರೆ, ಚುನಾವಣೆಗೆ ಹೋಗುವ ಕೊನೆಯ ವರ್ಷದಲ್ಲಿ ಸರ್ಕಾರದ ಕಾರ್ಯಗಳು ಫಲ ಕೊಡುತ್ತಿರಬೇಕು ಎಂದು ಬಯಸುತ್ತಾರೆ. ಹೀಗಾಗಿ 5 ನೇ ವರ್ಷ ಮೋದಿ ಸರ್ಕಾರದ ಮುಂದಿರುವ ಆಡಳಿತಾತ್ಮಕ ಸವಾಲುಗಳು ದೊಡ್ಡದಿವೆ.  

ತೈಲ ಬೆಲೆ ನಿಗ್ರಹ

ಕಳೆದ ಯುಪಿಎ ಸರ್ಕಾರದ ಮೇಲಿದ್ದ ಬಹುದೊಡ್ಡ ಆರೋಪ ಅದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ನಿಯಂತ್ರಿಸಿಲ್ಲ ಎಂಬುದಾಗಿತ್ತು. ಇದೀಗ ಮೋದಿ ಸರ್ಕಾರದ ಕೊನೆಯ ವರ್ಷದಲ್ಲೂ ತೈಲ ಬೆಲೆಗಳು ದುಬಾರಿಯಾಗಿ ಸರ್ಕಾರ ವನ್ನೂ ಜನರನ್ನೂ ಇಕ್ಕಟ್ಟಿಗೆ ಸಿಲುಕಿಸಿವೆ. ತೈಲೋತ್ಪನ್ನಗಳ ಮೇಲೆ ಸರ್ಕಾರ ವಿಧಿಸುತ್ತಿರುವ ಅಬಕಾರಿ ಸುಂಕ ಬಹಳ ಹೆಚ್ಚಿದೆ. ಅದನ್ನು ಇಳಿಕೆ ಮಾಡಿದರೆ ಸರ್ಕಾರದ ಜನಕಲ್ಯಾಣ ಯೋಜನೆಗಳಿಗೆ ಹಣದ ಲಭ್ಯತೆ ಕಡಿಮೆ ಯಾಗುತ್ತದೆ. ಆದರೆ, ತೈಲ ಬೆಲೆ ಇಳಿಸದಿದ್ದರೆ ದೇಶದ ಪ್ರತಿಯೊಬ್ಬರೂ ಅದರ ಬಿಸಿ ಉಣ್ಣುತ್ತಾರೆ. ಹೀಗಾಗಿ ಸರ್ಕಾರಕ್ಕೆ ಇದೊಂದು ಸವಾಲು.


ಉದ್ಯೋಗ ಸೃಷ್ಟಿ
ಲೋಕಸಭೆ ಚುನಾವಣೆಯ ಪ್ರಚಾರದ ವೇಳೆ ಮೋದಿ ತಾವು ಅಧಿಕಾರಕ್ಕೆ ಬಂದರೆ ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದ್ದರು. ಆದರೆ, ಕಳೆದ 4 ವರ್ಷಗಳಲ್ಲಿ ಒಂದು ಕೋಟಿಯೂ ಉದ್ಯೋಗ ಸೃಷ್ಟಿಯಾಗಿಲ್ಲ ಎಂದು ಪ್ರತಿಪಕ್ಷಗಳು ಟೀಕಿಸುತ್ತಿವೆ. ಅಷ್ಟೇ ಅಲ್ಲ, ಡಿಜಿಟಲ್ ಇಂಡಿಯಾ, ಕಂಪ್ಯೂಟರೀಕರಣ ಹಾಗೂ ಕೃತಕ ಬುದ್ಧಿಮತ್ತೆಯ ಬಳಕೆಯಿಂದ ಹಿಂದೆ ಇದ್ದ ಉದ್ಯೋಗಗಳಲ್ಲೂ ಕಡಿತವಾಗಿದೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ, ಸದ್ಯಕ್ಕಂತೂ 2009ರ ನಂತರ ಉದ್ಯೋಗ ಸೃಷ್ಟಿ ಅತಿ ಕಡಿಮೆ ಪ್ರಮಾಣಕ್ಕೆ ಕುಸಿದಿದೆ ಎಂದು ಅಂಕಿಅಂಶಗಳು ಹೇಳುತ್ತವೆ. ಇದನ್ನು ಹೆಚ್ಚಿಸದೆ ಇದ್ದರೆ ಉದ್ಯೋಗಾಕಾಂಕ್ಷಿಗಳು ಸರ್ಕಾರದ ಮೇಲೆ ಮುನಿಸಿಕೊಳ್ಳಬಹುದು.

ಯೋಜನೆಗಳ ಅನುಷ್ಠಾನ
ಮೋದಿ ಸರ್ಕಾರ ಬಹಳಷ್ಟು ಒಳ್ಳೆಯ ಯೋಜನೆಗಳನ್ನು ಘೋಷಿಸಿದೆ, ಆದರೆ ಅವುಗಳ ಅನುಷ್ಠಾನ ಮಾತ್ರ ಪೂರ್ತಿಯಾಗಿ ಆಗಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ. ಮೇಕ್ ಇನ್ ಇಂಡಿಯಾ, ಸ್ವಚ್ಛ ಭಾರತ, ಸ್ಕಿಲ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸರ್ವರಿಗೂ ಸೂರು, ಎಲ್ಲರಿಗೂ ಕೆಲಸ, ನಮಾಮಿ ಗಂಗೆ, ಸ್ಮಾರ್ಟ್ ಸಿಟಿ ಹೀಗೆ ಹತ್ತಾರು ಹೊಸ ಹೊಸ ಯೋಜನೆಗಳನ್ನು ಸರ್ಕಾರ ಪ್ರಕಟಿಸಿದೆ. ಆದರೆ, ಪೂರ್ಣಗೊಂಡಿಲ್ಲ. ಇನ್ನುಳಿದ ಒಂದು ವರ್ಷದಲ್ಲಿ ಇವುಗಳನ್ನು  ಪೂರ್ಣ ಗೊಳಿ ಸುವ ಅಥವಾ ಪೂರ್ಣಗೊಳ್ಳುತ್ತವೆ ಎಂಬ ವಿಶ್ವಾಸವನ್ನಾದರೂ ಮೂಡಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ.

ಬೆಲೆ ಏರಿಕೆ ನಿಯಂತ್ರಣ
ಏರುತ್ತಿರುವ ತೈಲ ಬೆಲೆಯು ದೇಶಾದ್ಯಂತ ಎಲ್ಲ ವಸ್ತುಗಳ ಬೆಲೆಯನ್ನೂ ಏರಿಕೆ ಮಾಡುತ್ತಿದೆ. ಹಣದುಬ್ಬರಕ್ಕೆ ತೈಲ ಬೆಲೆ ಏರಿಕೆಯೇ ಯಾವಾಗಲೂ ಪ್ರಮುಖ ಕಾರಣ. ಅದರಂತೆ ಈಗಲೂ ಸಗಟು ಹಣದುಬ್ಬರ ಹಾಗೂ ಚಿಲ್ಲರೆ ಹಣದುಬ್ಬರ ಗಳೆರಡೂ ಏರಿಕೆಯಾಗತೊಡಗಿವೆ. ಮೋದಿ ಸರ್ಕಾರದ ಮೊದಲ ಮೂರು ವರ್ಷ ಹಣದುಬ್ಬರ ನಿಯಂತ್ರಣದಲ್ಲಿತ್ತು. ಆದರೆ, ನಾಲ್ಕನೇ ವರ್ಷ ಏರತೊಡಗಿದ ಹಣದುಬ್ಬರ ಹಾಗೂ ಅದಕ್ಕಿಂತ ಮುಖ್ಯವಾಗಿ ಜಿಎಸ್‌ಟಿಯಿಂದಾಗಿ ಏರಿದ ಸರಕು ಹಾಗೂ ಸೇವೆಗಳ ಬೆಲೆಯು ಜನರನ್ನು ಕಷ್ಟಕ್ಕೆ ತಳ್ಳುತ್ತಿದೆ. ಇದನ್ನು ನಿಯಂತ್ರಿಸುವುದು ಬಹುದೊಡ್ಡ ಸವಾಲು.

ಕೃಷಿ ಕ್ಷೇತ್ರದ ಸಮಸ್ಯೆ
ಕೃಷಿ ಕ್ಷೇತ್ರ ಸಂಕಷ್ಟದಲ್ಲಿದೆ. ಬಹುತೇಕ ಎಲ್ಲ ರಾಜ್ಯಗಳಲ್ಲೂ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ದೇಶದ ಒಟ್ಟಾರೆ ಕೃಷಿ ಉತ್ಪನ್ನ ಹೆಚ್ಚಾಗುತ್ತಿದ್ದರೂ ರೈತರಿಗೆ ಮಾತ್ರ ಅದರ ಲಾಭ ಸಿಗುತ್ತಿಲ್ಲ. 2013ರಲ್ಲಿ ಕೃಷಿ ಹಾಗೂ ತತ್ಸಂಬಂಧಿ 
ಕ್ಷೇತ್ರಗಳಿಂದ ಜಿಡಿಪಿಗೆ ಶೇ.13ರಷ್ಟು ಆದಾಯ ಬರುತ್ತಿತ್ತು. ಈಗ ಅದು ಶೇ.5ಕ್ಕಿಂತ ಕೆಳಗೆ ಕುಸಿದಿದೆ. ಈ ಸಮಸ್ಯೆಯನ್ನು ಬಗೆಹರಿಸದಿದ್ದರೆ ಸರ್ಕಾರದ ಮೇಲೆ ರೈತಾಪಿ ಜನ ಮುನಿಸಿಕೊಳ್ಳಬಹುದು. ಕೃಷಿಕರ ಆದಾಯವನ್ನು  2022 ರೊಳಗೆ ದುಪ್ಪಟ್ಟು ಮಾಡಲಾಗುವುದು ಎಂಬ ಮೋದಿ ಹೇಳಿಕೆಗೆ ಇಲ್ಲಿಯವರೆಗೆ ಯಾವುದೇ ಸಾಕ್ಷ್ಯಗಳು ರೈತರಿಗೆ ಸಿಕ್ಕಿಲ್ಲ ಎಂಬ ಟೀಕೆಯಿದೆ.


ನ್ಯಾಯಾಂಗದ ಸಮಸ್ಯೆ
ದೇಶದ ನ್ಯಾಯಾಂಗದ ಇತಿಹಾಸದಲ್ಲೇ ಅಪರೂಪ ಹಾಗೂ ದುರದೃಷ್ಟಕರ ಎಂಬಂತಹ ಬೆಳವಣಿಗೆಗಳು ಸದ್ಯ ನಡೆಯುತ್ತಿವೆ. ಜಡ್ಜ್‌ಗಳ ಕೊರತೆಯಿದೆ. ನೇಮಕಾತಿಗೆ ಸರ್ಕಾರ ಉತ್ಸುಕತೆ ತೋರುತ್ತಿಲ್ಲ ಎಂಬ ಆರೋಪವಿದೆ. ದೇಶದ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧವೇ ಇತಿಹಾಸದಲ್ಲಿ ಮೊದಲ ಬಾರಿ ವಾಗ್ದಂಡನೆಗೆ ಪ್ರಯತ್ನ ನಡೆಯಿತು. ಇತಿಹಾಸದಲ್ಲಿ ಮೊದಲ ಬಾರಿ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ದೇಶದ ನ್ಯಾಯಾಂಗ ವ್ಯವಸ್ಥೆ ಸಂಕಷ್ಟದಲ್ಲಿದೆ ಎಂದು ಪತ್ರಿಕಾಗೋಷ್ಠಿ ನಡೆಸಿದರು. ಒಟ್ಟಾರೆ ನ್ಯಾಯಾಂಗದಲ್ಲಿ ಅಹಿತಕರ ಘಟನೆಗಳು ನಡೆಯುತ್ತಿರುವುದಂತೂ ನಿಜ.

ರಾಜ್ಯಗಳಿಗೆ ಅವಿಶ್ವಾಸ
ದೇಶದಲ್ಲಿ ರಾಜ್ಯಗಳಿಗೆ ಅವುಗಳದೇ ಆದ ಅಧಿಕಾರವಿದೆ. ಆದರೆ, ಇತ್ತೀಚಿನ ಕೆಲ ತಿಂಗಳಲ್ಲಿ ದಕ್ಷಿಣದ ರಾಜ್ಯಗಳು ಹಾಗೂ ಹಿಂದಿಯೇತರ ಇನ್ನೂ ಕೆಲ ರಾಜ್ಯಗಳು ಕೇಂದ್ರ ಸರ್ಕಾರವು ತಮ್ಮ ಮೇಲೆ ಸವಾರಿ ಮಾಡುತ್ತಿದೆ ಹಾಗೂ ಸರಿಯಾಗಿ ಅನುದಾನ ನೀಡದೆ ರಾಜ್ಯಗಳಿಗೆ ಅನ್ಯಾಯ ಮಾಡುತ್ತಿದೆ ಎಂಬ ಆರೋಪ ಮಾಡತೊಡಗಿವೆ. ಇದು ದೇಶದ ಪ್ರಜಾಪ್ರಭುತ್ವದ ಮೂಲ ವ್ಯವಸ್ಥೆಗೆ ಮಾರಕವಾದ ಅಂಶ. ಇಂತಹ ರಾಜ್ಯಗಳ ಜನರಲ್ಲಿ ಕೇಂದ್ರ ಸರ್ಕಾರದ ಬಗ್ಗೆ ವಿಶ್ವಾಸ ಮೂಡಿಸದೆ ಇದ್ದರೆ ಫೆಡರಲಿಸಂ ಅರ್ಥ ಕಳೆದುಕೊಳ್ಳುತ್ತದೆ. ಇದು ಕೇಂದ್ರದ ಆಡಳಿತ ವ್ಯವಸ್ಥೆಗೆ ಸಂಬಂಧಿಸಿದ ನೇರವಾದ ಅಂಶ.

click me!