
ಶ್ರೀನಗರ(ಮೇ.26]: ಕಳೆದ ವರ್ಷ ಕಾಶ್ಮೀರದಲ್ಲಿ ಕಲ್ಲು ತೂರಾಟದಿಂದ ಪಾರಾಗಲು ವ್ಯಕ್ತಿಯೊಬ್ಬನನ್ನು ಸೇನಾ ಜೀಪ್‌ಗೆ ಕಟ್ಟಿ ಭದ್ರತಾ ಸಿಬ್ಬಂದಿಯನ್ನು ರಕ್ಷಿಸಿದ್ದ ಮೇಜರ್ ನಿತಿನ್ ಲೀತುಲ್ ಗೊಗೋಯ್ ವಿರುದ್ಧ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಭಾರತೀಯ ಸೇನೆಯು ವಿಚಾರಣೆಗೆ ಆದೇಶಿಸಿದೆ.
ಬುಧವಾರ 18 ವರ್ಷದ ಯುವತಿಯೊಬ್ಬಳ ಜೊತೆ ಗೊಗೋಯ್ ಅವರು ಹೋಟೆಲೊಂದಕ್ಕೆ ಪ್ರವೇಶಿಸಲು ಯತ್ನಿಸಿದ ವೇಳೆ ವಾಗ್ವಾದ ನಡೆದು, ಪೊಲೀಸರ ವಶಕ್ಕೆ ಒಪ್ಪಿಸಲ್ಪಟ್ಟಿದ್ದರು. ಈ ಘಟನೆಗೆ ಸಂಬಂಧಿಸಿ ಈಗ ಸೇನೆಯು, ಸೇನಾ ನ್ಯಾಯಾಲಯದಲ್ಲಿ ವಿಚಾರಣೆಗೆ ಆದೇಶಿಸಿದೆ. ವಿಚಾರಣಾ ವರದಿಯ ಆಧಾರದಲ್ಲಿ ಮುಂದಿನ ಕ್ರಮಕೈಗೊಳ್ಳಲಾಗುತ್ತದೆ ಎಂದು ಸೇನಾ ಮೂಲಗಳು ತಿಳಿಸಿವೆ. ಗೊಗೋಯ್ ತಪ್ಪಿತಸ್ಥರು ಎಂದು ಕಂಡುಬಂದಲ್ಲಿ, ಸೂಕ್ತ ಶಿಕ್ಷೆ ನೀಡಲಾಗುತ್ತದೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಪಹಲ್ಗಾಂನಲ್ಲಿ ಶುಕ್ರವಾರ ಹೇಳಿಕೆ ನೀಡಿದರು. ಇದರ ಬೆನ್ನಲ್ಲೇ ವಿಚಾರಣಾ ಆದೇಶ ಹೊರಡಿಸುವ ನಿರ್ಧಾರ ಕೈಗೊಳ್ಳಲಾಗಿದೆ.
‘ಭಾರತೀಯ ಸೇನೆಯ ಯಾವುದೇ ಅಧಿಕಾರಿ ತಪ್ಪಿತಸ್ಥನೆಂದು ಗುರುತಿಸಲ್ಪಟ್ಟರೆ, ನಾವು ಸಾಧ್ಯವಾದಷ್ಟು ಕಠಿಣ ಕ್ರಮ ಕೈಗೊಳ್ಳುತ್ತೇವೆ. ಮೇಜರ್ ಗೊಗೋಯ್ ಯಾವುದೇ ತಪ್ಪು ಮಾಡಿದ್ದರೂ, ಶೀಘ್ರವೇ ಅವರಿಗೆ ಶಿಕ್ಷೆ ವಿಧಿಸಲಾಗುತ್ತದೆ ಎಂದು ನಾನು ಭರವಸೆ ನೀಡುತ್ತೇನೆ. ಶಿಕ್ಷೆಯು ಅನುಕರಣೀಯವಾಗಿರುತ್ತದೆ’ ಎಂದು ಜ.ರಾವತ್ ಹೇಳಿದ್ದಾರೆ.
ಮೇ 23ರಂದು ನಡೆದ ಘಟನೆಯ ಬಗ್ಗೆ ಜಮ್ಮು-ಕಾಶ್ಮೀರ ಪೊಲೀಸರು ಈಗಾಗಲೇ ವಿಚಾರಣೆ ನಡೆಸುತ್ತಿದ್ದಾರೆ. ಬದ್ಗಾಮ್'ನ ಓರ್ವ ಯುವತಿ ಮತ್ತು ತಮ್ಮ ಡ್ರೈವರ್ ಜೊತೆ ಗೊಗೋಯ್ ಬುಧವಾರ ಹೋಟೆಲ್ ಒಂದಕ್ಕೆ ತೆರಳಿದ್ದರು. ಈ ವೇಳೆ ಯುವತಿಯೊಂದಿಗೆ ಕೋಣೆಗೆ ಹೋಗುವುದಕ್ಕೆ ಹೋಟೆಲ್ ಸಿಬ್ಬಂದಿ ನಿರಾಕರಿಸಿದ್ದರು. ಹೀಗಾಗಿ ವಾಗ್ವಾದ ನಡೆದು, ಗೊಗೋಯ್ ಮತ್ತು ಅವರೊಂದಿಗಿದ್ದವರನ್ನು ಪೊಲೀಸರಿಗೆ ಒಪ್ಪಿಸಲಾಗಿತ್ತು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.