ಮೋದಿ - ಅಡ್ವಾಣಿ ರಹಸ್ಯ ಸಭೆ .. ! ಅಡ್ವಾಣಿ ಭವಿಷ್ಯ ನಿರ್ಧಾರ..?

First Published Jun 6, 2018, 10:57 AM IST
Highlights

ಹೆಚ್ಚೂಕಡಿಮೆ ತೆರೆಮರೆಗೆ ಸರಿದಿರುವ ಪಕ್ಷದ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ರಸಹ್ಯವಾಗಿ ಭೇಟಿ ಮಾಡಿ ಪ್ರಮುಖ ವಿಚಾರವೊಂದರ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ನವದೆಹಲಿ: ಹೆಚ್ಚೂಕಡಿಮೆ ತೆರೆಮರೆಗೆ ಸರಿದಿರುವ ಪಕ್ಷದ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ ಅವರಿಗೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್‌ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು ಬಯಸಿದ್ದಾರೆ ಎಂದು ಹೇಳಲಾಗಿದೆ.

90 ವರ್ಷದ ಅಡ್ವಾಣಿ ಅವರನ್ನು ದೆಹಲಿಯ ಪೃಥ್ವಿರಾಜ ರಸ್ತೆಯ ಅವರ ನಿವಾಸದಲ್ಲಿ ಇತ್ತೀಚೆಗೆ ಖುದ್ದು ಮೋದಿ ಅವರೇ ಭೇಟಿ ಮಾಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಕೂಡ ಟಿಕೆಟ್‌ ಪ್ರಸ್ತಾಪದೊಂದಿಗೆ ಅಡ್ವಾಣಿ ಜತೆಗೆ ಸಮಾಲೋಚನೆ ನಡೆಸಿದ್ದಾರೆ ಎಂದು ಬಂಗಾಳಿ ಪತ್ರಿಕೆಯೊಂದು ವರದಿ ಮಾಡಿದೆ. ಅಡ್ವಾಣಿ ಜತೆಗೆ ಮುರಳಿ ಮನೋಹರ ಜೋಶಿಗೂ ಟಿಕೆಟ್‌ ಲಭಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಪಕ್ಷದ ಪರಮೋಚ್ಚ ನೀತಿ ನಿರೂಪಣಾ ಮಂಡಳಿಯಾದ ಸಂಸದೀಯ ಪಕ್ಷದಲ್ಲಿ ಸ್ಥಾನವಂಚಿತರಾಗಿದ್ದ ಅಡ್ವಾಣಿ ಹಾಗೂ ಮತ್ತೊಬ್ಬ ಹಿರಿಯ ನಾಯಕ ಮುರಳಿ ಮನೋಹರ ಜೋಶಿ ಅವರಿಗಾಗಿ ಅಮಿತ್‌ ಶಾ ಅವರು ‘ಮಾರ್ಗದರ್ಶಕ ಮಂಡಳಿ’ ರಚಿಸಿದ್ದರು. ಮೋದಿ, ಸ್ವತಃ ಶಾ, ರಾಜನಾಥ ಸಿಂಗ್‌ ಜತೆಗೆ ಅಡ್ವಾಣಿ, ಜೋಶಿ ಸದಸ್ಯರಾಗಿರುವ ಈ ಮಂಡಳಿ ಈವರೆಗೆ ಒಮ್ಮೆಯೂ ಸಭೆ ಸೇರಿಲ್ಲ. ಇದು ಅಡ್ವಾಣಿ, ಜೋಶಿ ಅವರನ್ನು ಮೂಲೆಗುಂಪು ಮಾಡುವ ಪ್ರಯತ್ನ ಎಂದೇ ವಿಶ್ಲೇಷಿಸಲಾಗಿತ್ತು.

2014ರ ಲೋಕಸಭೆ ಚುನಾವಣೆಯಲ್ಲಿ ಗುಜರಾತಿನ ಗಾಂಧಿನಗರದಿಂದ ಎಲ್‌.ಕೆ. ಅಡ್ವಾಣಿ ಅವರು ಚುನಾಯಿತರಾಗಿದ್ದರು. ಕಾನ್ಪುರದಿಂದ ಜೋಶಿ ಆಯ್ಕೆಯಾಗಿದ್ದರು.

click me!