ಕಾಶ್ಮೀರಕ್ಕೆ ಪ್ರತ್ಯೇಕ ರಾಷ್ಟ್ರಪತಿ, ಪ್ರಧಾನಿ!: ಇದೇನಿದು ಹೊಸ ವಿವಾದ? ಇಲ್ಲಿದೆ ವಿವರ
ಶ್ರೀನಗರ: ಜಮ್ಮು[ಏ.02]: ಕಾಶ್ಮೀರಕ್ಕೆ ಸ್ವಾಯತ್ತೆ ನೀಡಲು ತಮ್ಮ ಪಕ್ಷ ಅವಿರತ ಶ್ರಮಿಸಲಿದ್ದು, ಪ್ರತ್ಯೇಕ ರಾಷ್ಟ್ರಪತಿ ಮತ್ತು ಪ್ರಧಾನಿ ಹುದ್ದೆಯನ್ನು ಸೃಷ್ಟಿಸಲಾಗುವುದು ಎಂದು ನ್ಯಾಷನಲ್ ಕಾನ್ಫೆರೆನ್ಸ್ ಮುಖಂಡ ಒಮರ್ ಅಬ್ದುಲ್ಲಾ ವಿವಾದಿತ ಹೇಳಿಕೆ ನೀಡಿದ್ದಾರೆ. ಒಮರ್ ಅಬ್ದುಲ್ಲಾ ಹೇಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ಖಂಡಿಸಿದ್ದಾರೆ.
ಬಂಡಿಪೋರ್‌ನಲ್ಲಿ ರಾರಯಲಿಯೊಂದನ್ನು ಉದ್ದೇಶಿಸಿ ಮಾತನಾಡಿದ ಒಮರ್ ಅಬ್ದುಲ್ಲಾ, ತಮ್ಮ ಪಕ್ಷ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನದ ಮೇಲೆ ನಡೆಯುವ ಯಾವುದೇ ದಾಳಿಯನ್ನು ಸಹಿಸಿಕೊಳ್ಳುವುದಿಲ್ಲ. ರಾಜ್ಯಕ್ಕೆ ಸ್ವಾಯತ್ತೆ ನೀಡುವತ್ತ ಶ್ರಮಿಸಲಾಗುವುದು. ಸ್ವಾಯತ್ತ ಸ್ಥಾನಮಾನ ಲಭಿಸಿದರೆ ಜಮ್ಮು ಕಾಶ್ಮೀರಕ್ಕೇ ಪ್ರತ್ಯೇಕ ಪ್ರಧಾನಿ ಮತ್ತು ರಾಷ್ಟ್ರಪತಿ ಹುದ್ದೆಯನ್ನು ಸೃಷ್ಟಿಸಲಾಗುವುದು ಎಂದು ಹೇಳಿದ್ದಾರೆ.
ಇದೇ ವೇಳೆ ತೆಲಂಗಾಣದ ಸಿಕಂದಾರಾಬಾದ್‌ನಲ್ಲಿ ಆಯೋಜಿಸಿದ್ದ ರಾರಯಲಿಯೊಂದರಲ್ಲಿ ಒಮರ್ ಅಬ್ದುಲ್ಲಾಗೆ ತಿರುಗೇಟು ನೀಡಿರುವ ನರೇಂದ್ರ ಮೋದಿ, ಈ ವಿಷಯವಾಗಿ ಮಹಾಗಠಬಂಧನದ ಮುಖಂಡರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು. ಒಮರ್ ಹೇಳಿಕೆಯನ್ನು ಕಾಂಗ್ರೆಸ್ ಬೆಂಬಲಿಸಲಿದೆಯೇ ಎಂದು ಪ್ರಶ್ನಿಸಿದ್ದಾರೆ.