
ರಾಂಚಿ: ಪ್ರಧಾನಿ ನರೇಂದ್ರ ಮೋದಿ ಅವರು ‘ಮೋದಿ ಕೇರ್’ ಎಂದೇ ಜನಜನಿತವಾಗಿರುವ ಭಾನುವಾರ ಆಯುಷ್ಮಾನ್ ಭಾರತ ಯೋಜನೆಯನ್ನು ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಲೋಕಾರ್ಪಣೆಗೊಳಿಸಿದರು. ಈ ವೇಳೆ ಮಾತನಾಡಿದ ಅವರು, ‘ಬಡವರ ಸೇವೆಗೈಯುವಲ್ಲಿ ಇದೊಂದು ಭಾರಿ ಬದಲಾವಣೆ ತರುವ ಕ್ರಮ’ ಎಂದು ಶ್ಲಾಘಿಸಿದರು.
‘ಆಯುಷ್ಮಾನ್ ಭಾರತ ಯೋಜನೆಯು ವಿಶ್ವದಲ್ಲೇ ಅತಿ ದೊಡ್ಡ ಸರ್ಕಾರಿ ಪ್ರಾಯೋಜಿತ ಆರೋಗ್ಯ ಯೋಜನೆಯಾಗಿದೆ. ಕೆನಡಾ, ಮೆಕ್ಸಿಕೋ ಮತ್ತು ಅಮೆರಿಕವನ್ನು ಸೇರಿಸಿದರೆ ಒಟ್ಟಿಗೆ ಎಷ್ಟು ಜನಸಂಖ್ಯೆಯಾಗುತ್ತದೋ ಅಷ್ಟು ಸಂಖ್ಯೆಯ ಫಲಾನುಭವಿಗಳು ಈ ಯೋಜನೆಯಲ್ಲಿ ಸೇರ್ಪಡೆಯಾಗಿದ್ದಾರೆ’ ಎಂದರು.
ಈ ಸಂದರ್ಭದಲ್ಲೂ ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಳ್ಳುವುದನ್ನು ಮರೆಯದ ಮೋದಿ, ‘ಹಿಂದಿನ ಸರ್ಕಾರಗಳು ಮತ ಬ್ಯಾಂಕ್ ರಾಜಕೀಯದಲ್ಲಿ ನಿರತವಾಗಿದ್ದವು. ಅವು ಬಡವರ ಸಬಲೀಕರಣವನ್ನು ಮರೆತಿದ್ದವು. ಈಗ ಬಿಜೆಪಿ ಸರ್ಕಾರವು ಬಡವರ ಸಬಲೀಕರಣದಲ್ಲಿ ನಿರತವಾಗಿದೆ’ ಎಂದರು.
ಇನ್ನು ಆಯುಷ್ಮಾನ್ ಯೋಜನೆಯಲ್ಲಿನ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದ ಪ್ರಧಾನಿ, ‘ಸುಮಾರು 1300 ವ್ಯಾಧಿಗಳು ಈ ಯೋಜನೆಯ ಅಡಿ ಬರುತ್ತವೆ. ಹೃದಯ ಕಾಯಿಲೆ, ಮೂತ್ರಪಿಂಡ ಕಾಯಿಲೆ, ಸಕ್ಕರೆ ಕಾಯಿಲೆ, ಪಿತ್ತಕೋಶ ಕಾಯಿಲೆಗಳು ಆಯುಷ್ಮಾನ್ ಯೋಜನೆಯ ಅಡಿ ಬರುತ್ತವೆ’ ಎಂದು ವಿವರಿಸಿದರು. ಈ ಯೋಜನೆಯನ್ನು ಮೋದಿ ಕೇರ್ ಎಂದು ಕರೆಯುತ್ತಾರೆ. ಆದರೆ ಬಡವರ ಸೇವೆ ಮಾಡಲು ನನಗೆ ಇದೊಂದು ಉತ್ತಮ ಅವಕಾಶ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯೋಜನೆಯ ಲಾಭ ದೊರಕುತ್ತದೆ.
ಈ ಯೋಜನೆಯ ಜಾರಿಗೆ ಸಹಕರಿಸಿದ ಅಧಿಕಾರಿಗಳಿಗೆ 50 ಕೋಟಿ ಬಡವರ ಆಶೀರ್ವಾದ ಲಭಿಸಲಿದೆ ಎಂದರು. ಶ್ರೀಮಂತರಿಗೆ ದೊರಕುವ ಎಲ್ಲ ಆರೋಗ್ಯ ಸವಲತ್ತುಗಳು ಬಡವರಿಗೂ ದೊರಕಬೇಕು ಎಂಬ ಇರಾದೆ ತಮ್ಮದು. ಈ ಯೋಜನೆಯು ಯಾವುದೇ ಜಾತಿ ಆಧರಿತವಾಗಿಲ್ಲ. ಎಲ್ಲ ಜಾತಿ-ವರ್ಗದವರಿಗೆ ಇದರ ಸವಲತ್ತು ದೊರೆಯುತ್ತದೆ. ವಿಶ್ವದಲ್ಲೇ ಮಾದರಿ ಆರೋಗ್ಯ ಯೋಜನೆಯಾಗಿ ಇದು ಹೊರಹೊಮ್ಮಲಿದೆ ಎಂದು ವಿವರಿಸಿದರು. ಆಯುಷ್ಮಾನ್ ಭಾರತದ ಅಡಿ ಬರಲು ಯಾರೂ ನೋಂದಣಿ ಮಾಡಿಕೊಳ್ಳಬೇಕಿಲ್ಲ. ಇದರ ಸವಲತ್ತು ಲಭಿಸುವಂತಾಗಲು ಹೆಲ್ತ್ ಕಾರ್ಡ್ ನೀಡಲಾಗುತ್ತದೆ. ಯೋಜನೆಯ ಹೆಚ್ಚಿನ ಮಾಹಿತಿ ಪಡೆಯಲು ಟೋಲ್ ಫ್ರೀ ಸಂಖ್ಯೆಯನ್ನು ಕೊಡಲಾಗುತ್ತದೆ ಎಂದು ಅವರು ವಿವರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.