
ನವದೆಹಲಿ (ನ.05): ಅಪಮೌಲ್ಯಕ್ಕೆ ಒಂದು ವರ್ಷವಾಗುತ್ತಿರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಅಕ್ರಮವಾಗಿ ಆಸ್ತಿ ಸಂಪಾದಿಸಿರುವ ಮಂದಿಗೆ ಶಾಕ್ ನೀಡಲು ಸಿದ್ಧವಾಗಿದ್ದಾರೆ. ಮನೆಯ ಅಡುಗೆಯವ, ಡ್ರೈವರ್‌ಗಳ ಹೆಸರಲ್ಲಿ ಭರ್ಜರಿ ಆಸ್ತಿ ಮಾಡಿಟ್ಟಿರುವವರ ಜನ್ಮ ಜಾಲಾಡುವ ಬಗ್ಗೆ ಸುಳಿವು ನೀಡಿರುವ ಮೋದಿ ಅವರು, ಸದ್ಯದಲ್ಲೇ ಬೇನಾಮಿ ಕಾಯ್ದೆ ಅಸ್ತ್ರ ಪ್ರಯೋಗಿಸುವುದಾಗಿ ಹೇಳಿದ್ದಾರೆ.
ಈಗಾಗಲೇ ನೋಟು ಅಪಮೌಲ್ಯದಿಂದ ಶಾಕ್‌ಗೆ ಒಳಗಾಗಿರುವ ಕಾಂಗ್ರೆಸಿಗರು, ಇದೀಗ ಸರಕಾರದ ಬೇನಾಮಿ ಬ್ರಹ್ಮಾಸ್ತ್ರ ಎದುರಿಸುವ ಸಂಕಷ್ಟಕ್ಕೆ ಈಡಾಗಿದ್ದಾರೆ ಎಂದು ಅವರು ವ್ಯಂಗ್ಯವಾಡಿದ್ದಾರೆ. ಬಡವರಿಂದ ಲೂಟಿ ಮಾಡಿರುವುದನ್ನು ವಾಪಸ್ ಕೊಡಿಸಲು ಸಮಯ ಕೂಡಿಬಂದಿದೆ. ಕಾಂಗ್ರೆಸ್ ನಾಯಕರು ಬೇರೆಯವರ ಹೆಸರಲ್ಲಿ ಮಾಡಿರುವ ಬೇನಾಮಿ ಆಸ್ತಿಯನ್ನು ಸಕ್ರಮ ಮಾಡಿಕೊಳ್ಳಲು ನಾನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಅಂಥ ವಾತಾವರಣವನ್ನೇ ಸೃಷ್ಟಿಸುತ್ತಿದ್ದೇನೆ'' ಎಂದು ಹೇಳಿದರು. ಅಲ್ಲದೆ, ನ.8 ರಂದು ಕಾಂಗ್ರೆಸ್ ನಾಯಕರು ದೇಶಾದ್ಯಂತ ಕರಾಳ ದಿನ ಆಚರಿಸಲು ನೋಡುತ್ತಿದ್ದಾರೆ. "ಅವರ ಪ್ರಕಾರ ಭ್ರಷ್ಟಾಚಾರದ ವಿರುದ್ಧ ಹೋರಾಡಿದ್ದೇ ನಾನು ಮಾಡಿದ ಅತಿದೊಡ್ಡ ಪಾಪ' ಎಂದೂ ವ್ಯಂಗ್ಯವಾಡಿದರು.
ಏನಿದು ಬೇನಾಮಿ ಆಸ್ತಿ?
ಬೇನಾಮಿ ಎಂಬುದು ಹಿಂದಿ ಪದವಾಗಿದ್ದು, ಹೆಸರಿಲ್ಲದ್ದು ಎಂಬ ಅರ್ಥವಿದೆ. ಅಂದರೆ ತೆರಿಗೆ ತಪ್ಪಿಸಿಕೊಳ್ಳುವ ಸಲುವಾಗಿ ತಮ್ಮ ಹೆಸರಿಗೆ ಬಿಟ್ಟು ಪತ್ನಿ, ಮಕ್ಕಳು ಅಥವಾ ಬೇರೆ ಅನಾಮಧೇಯ ವ್ಯಕ್ತಿಗಳ ಹೆಸರಲ್ಲಿ ಆಸ್ತಿ ಖರೀದಿ ಮಾಡುವುದು. ಅಂದರೆ ತಮ್ಮ ಕಪ್ಪುಹಣದಿಂದ ಆಸ್ತಿ ಖರೀದಿಸಿ ಸರಕಾರಕ್ಕೂ ತೆರಿಗೆ ಕಟ್ಟದೇ ಮಣ್ಣೆರಚುವ ಕೆಲಸ ಮಾಡಲಾಗುತ್ತದೆ. ಇದಷ್ಟೇ ಅಲ್ಲ, ಸಹೋದರ, ಸಹೋದರಿ, ಸಂಬಂಧಿ ಅಥವಾ ಇನ್ನಾವುದೇ ವ್ಯಕ್ತಿಯ ಜತೆ ಜಂಟಿಯಾಗಿ ಆಸ್ತಿ ಖರೀದಿಸುವುದೂ ಬೇನಾಮಿ ಆಸ್ತಿ ಎಂದೇ ಪರಿಗಣಿತವಾಗುತ್ತದೆ. ಇದರಲ್ಲಿ ಸ್ಥಿರಾಸ್ತಿ, ಚರಾಸ್ತಿ, ಮೂರ್ತ, ಅಮೂರ್ತ, ಯಾವುದೇ ರೀತಿಯ ಹಕ್ಕು ಅಥವಾ ಆಸಕ್ತಿ ಅಥವಾ ಕಾನೂನು ಪತ್ರಗಳು ಸೇರಿವೆ.
ಬೇನಾಮಿ ಕಾಯ್ದೆ 1988
ಈಗಾಗಲೇ ಭಾರತದಲ್ಲಿ ಬೇನಾಮಿ ಆಸ್ತಿ ಮಾಡಿಕೊಳ್ಳದಂತೆ ತಡೆಗಟ್ಟುವ ನಿಟ್ಟಿನಲ್ಲಿ 1988ರಲ್ಲೇ ಕಾಯ್ದೆಯೊಂದನ್ನು ಜಾರಿಗೆ ತರಲಾಗಿದೆ. ಆದರೆ ಮೋದಿ ಸರಕಾರ ಬಂದ ಮೇಲೆ ಇದಕ್ಕೆ ತಿದ್ದುಪಡಿ ಮಾಡಿ 2016ರ ನವೆಂಬರ್ 1ರಿಂದಲೇ ಜಾರಿ ಮಾಡಲಾಗಿದೆ. ಇದರನ್ವಯ ಬೇನಾಮಿ ಆಸ್ತಿ ಮಾಡಿದವರಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದಾಗಿದೆ. ಇದಷ್ಟೇ ಅಲ್ಲ, ಬೇನಾಮಿ ಆಸ್ತಿಯನ್ನು ಸರಕಾರ ಹಿಂದೆಮುಂದೆ ನೋಡದೆ ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶವೂ ಈ ತಿದ್ದುಪಡಿಯಲ್ಲಿ ಸೇರಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.