
ಬೆಳಗಾವಿ: ದೇಶದ ಆರ್ಥಿಕ ಸ್ಥಿತಿ ಕುಸಿದುಹೋಗಿದ್ದು, ದೇಶದ ಆರ್ಥಿಕ ಸಮಸ್ಯೆ ಪರಿಹರಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ವಿ.ಮೋಹನ ಟೀಕಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಆರ್ಥಿಕ ನೀತಿ, ನಿರೂಪಣೆಯಿಂದ ದೇಶದ ಆರ್ಥಿಕ ಸ್ಥಿತಿಗೆ ಲಕ್ವಾ ಹೊಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಆರ್ಥಿಕ ಪರಿಸ್ಥಿತಿ ಕುರಿತು ಮೌನ ಮುರಿದಿದ್ದಾರೆ. ಆದರೆ, ಅವರ ಮಾತಿಗೆ ಯಾವುದೇ ದಾಖಲೆ ಇಲ್ಲವಾಗಿದೆ. ಬಿಜೆಪಿಯವರೇ ದೇಶದ ಆರ್ಥಿಕ ಸ್ಥಿತಿ ಕುರಿತು ಟೀಕಿಸುತ್ತಿದ್ದಾರೆ. ಕೇಂದ್ರದ ಭರವಸೆ ನಂಬಿದ್ದ ಯುವಕರು ಭ್ರಮನಿರಸನಗೊಂಡಿದ್ದಾರೆ. ಯುವ ಜನತೆ ವಿಶ್ವಾಸರ್ಹತೆಗೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿದರು.
ಕಳೆದ ಲೋಕಸಭಾ ಚುನಾವಣೆ ವೇಳೆ ದೇಶದ ಆರ್ಥಿಕ ಸ್ಥಿತಿ ಸುಧಾರಣೆ ಮಾಡುವುದಾಗಿ ಭರವಸೆ ನೋಡಿ ಮತದಾರರು ಬಿಜೆಪಿ ಮತ ಚಲಾಯಿಸಿದ್ದಾರೆ. ಆದರೆ, ಇಂದು ದೇಶದ ಆರ್ಥಿಕ ಸ್ಥಿತಿ ಸಂಪೂರ್ಣವಾಗಿ ಕುಗ್ಗಿಹೋಗಿದೆ. ಮಾಜಿ ಪ್ರಧಾನ ಡಾ.ಮನಮೋಹನ ಸಿಂಗ್ ಅಧಿಕಾರವಧಿಯ ಕೊನೆಯಲ್ಲಿ ದೇಶದ ಆರ್ಥಿಕ ಸ್ಥಿತಿ ಸುಭದ್ರದ ಅಡಿಪಾಯ ಇತ್ತು. ಸಿಂಗ್ ಅಧಿಕಾರವಧಿಯಲ್ಲಿಯೇ ಅಚ್ಚೆದಿನಗಳಿದ್ದವು. ಆದರೆ, ಮೋದಿ ಸರ್ಕಾರ ನೋಟು ಅಮಾನ್ಯೀಕರಣ ಹಾಗೂ ಜಿಎಸ್‌ಟಿ ಜಾರಿಗೊಳಿಸುವ ಮೂಲಕ ಜನಸಾಮಾನ್ಯರ ಮೇಲೆ ಹೊರೆಹಾಕಲಾಗಿದೆ. ದೇಶದ ಆರ್ಥಿಕ ಸ್ಥಿತಿ ತೀರಾ ಕುಸಿದಿದೆ. ಸದ್ಯದ ಪರಿಸ್ಥಿತಿಯಲ್ಲಿ ಮೋದಿ ಸರ್ಕಾರ ಕಾಂಗ್ರೆಸ್‌ನ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಿದೆ. ನೋಟು ಅಮಾನ್ಯೀಕರಣದಿಂದಾಗಿ ದೇಶದಲ್ಲಿ ನೂರಾರು ಜನರು ಪ್ರಾಣ ಕಳೆದುಕೊಂಡರು. ಜಿಎಸ್‌ಟಿ ಜಾರಿಗೊಳಿಸಿರುವುರಿಂದ 10 ಕೋಟಿ ಸಣ್ಣ ಉದ್ದಿಮೆದಾರರು ಕಂಗಾಲಾಗಿದ್ದಾರೆ. ಕೇಂದ್ರ ಸರ್ಕಾರ ಜನವಿರೋಧಿ ಸರ್ಕಾರವಾಗಿದೆ.
ಇಷ್ಟೆಲ್ಲವಾದರೂ ಬಿಜೆಪಿ ಸಂಸದರ್ಯಾರು ಮಾತನಾಡಲು ಹೆದರುತ್ತಿದ್ದಾರೆ. ಜಿಎಸ್‌ಟಿ ಎನ್ನುವುದು ಶೋಷಣೆ ಮಾಡುವ ಆಯುಧವಾಗಿದೆ. ಪತ್ರಕರ್ತೆ ಗೌರಿ ಲಂಕೇಶ ಹತ್ಯೆಯ ಮೂಲಕ ಭಯದ ವಾತಾವರಣ ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿದರು.
ಜಿಲ್ಲಾ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ವಿನಯ ನವಲಗಟ್ಟಿ, ಪ್ರಧಾನ ಕಾರ್ಯದರ್ಶಿ ರಾಜಾ ಸಲೀಮ ಖಾಶೀಮನವರ ಸೇರಿದಂತೆ ಮತ್ತಿತರರು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.