ಮೋದಿ ಮಾತಾಡೋವಾಗ್ಲೂ ಕಾಲ್ ಕಟ್ ಆಗತ್ತೆ: ತಮ್ಮ ಕರೆಯ 'ಸತ್ಯ'ಬಿಚ್ಚಿಟ್ಟ ಮೋದಿ!

By Web DeskFirst Published Sep 27, 2018, 4:00 PM IST
Highlights

ಮೋದಿ ಮಾತಾಡೋವಾಗ ಕಾಲ್ ಡ್ರಾಪ್! ಕರೆ ಕಟ್ ಸಮಸ್ಯೆ ಕಂಡು ಸಿಡುಕಿದ ಪ್ರಧಾನಿ! ಟೆಲಿಕಾಂ ಇಲಾಖೆ ಅಧಿಕಾರಿಗಳೊಂದಿಗೆ ಸಭೆ! ಸಮಸ್ಯೆ ಬಗೆಹರಿಸಲು ಕ್ರಮಕ್ಕೆ ಪ್ರಧಾನಿ ಸೂಚನೆ

ನವದೆಹಲಿ(ಸೆ.27): ಮೊಬೈಲ್‌ನಲ್ಲಿ ಮಾತನಾಡುವಾಗ ಕರೆ ಸ್ಥಗಿತವಾಗುವುದು ಸರ್ವೆ ಸಾಮಾನ್ಯ ಸಂಗತಿಯಾಗಿ ಬಿಟ್ಟಿದೆ. ಕಾಲ್ ಡ್ರಾಪ್ ಎಂದು ಸಾಮಾನ್ಯವಾಗಿ ಕರೆಯಲಾಗುವ ಈ ಅಸೌಕರ್ಯಕ್ಕೆ ಈ ದೇಶದ ಸಾಮಾನ್ಯ ನಾಗರಿಕ ಮಾತ್ರವಲ್ಲ ದೇಶದ ಪ್ರಧಾನಿ ಕೂಡ ಬಲಿಪಶುವಾಗಿದ್ದಾರೆ ಎಂದರೆ ನೀವು ನಂಬ್ಲೇಬೇಕು.

ಹೌದು, ಇತ್ತೀಚೆಗೆ ಪ್ರಧಾನಿ ಮೋದಿ ನವದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತಮ್ಮ ಅಧಿಕೃತ ನಿವಾಸದತ್ತ ಪ್ರಯಾಣ ಬೆಳೆಸುತ್ತಿದ್ದಾಗ ಅವರ ಮೊಬೈಲ್ ಕೂಡ ಕಾಲ್ ಡ್ರಾಪ್ ಸಮಸ್ಯೆ ಎದುರಿಸಿದೆ.

ಈ ಕುರಿತು ಟೆಲಿಕಾಂ ಸಂಸ್ಥೆಗೆ ಮಾಹಿತಿ ರವಾನಿಸಿರುವ ಮೋದಿ, ಕಾಲ್ ಡ್ರಾಪ್ ಸಮಸ್ಯೆ ಬಹಳ ಗಂಭೀರವಾಗಿದ್ದು ಇದರಿಂದ ಜನತೆ ತೊಂದರೆ ಅನುಭವಿಸುವಂತಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಪ್ರಧಾನಿ ಮೋದಿ ಎಲ್ಲಾ ಇಲಾಖೆಗಳ ಅಧಿಕಾರಿಗಳೊಂದಿಗೆ ತಿಂಗಳಿಗೊಮ್ಮೆ ಡಿಜಿಟಲ್ ಸಂವಾದ ನಡೆಸುತ್ತಾರೆ. ಅದರಂತೆ ಈ ಬಾರಿ ಟೆಲಿಕಾಂ ವಿಭಾಗದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಕಾಲ್ ಡ್ರಾಪ್ ಸಮಸ್ಯೆ ಕುರಿತಂತೆ ದಾಖಲಾದ ದೂರುಗಳ ಪರಿಶೀಲನೆ ನಡೆಸಿದರು.

ಇದೇ ವೇಳೆ ಟೆಲಿಕಾಂ ಇಲಾಖೆಯ ಕಾರ್ಯದರ್ಶಿ ಅರುಣಾ ಸುಂದರ್‌ರಾಜನ್ ಜೊತೆ ಮಾತುಕತೆ ನಡೆಸಿದ ನಡೆಸಿದ ಪ್ರಧಾನಿ, ತಮಗೂ ಎದುರಾದ ಕಾಲ್ ಡ್ರಾಪ್ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಅಲ್ಲದೇ ಕೂಡಲೇ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

click me!