
ನವದೆಹಲಿ(ಅ.30): ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದ 25 ನೇ ಸಂಚಿಕೆಯಲ್ಲಿ ದೇಶದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದರು. ಇದರೊಂದಿಗೆ ಈ ಬಾರಿಯ ದೀಪಾವಳಿಯನ್ನು ಗಡಿ ಕಾಯುವ ಸೈನಿಕರಿಗೆ ಅರ್ಪಿಸುವುದಾಗಿ ಹೇಳಿದರು.
ಕಳೆದ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮೋದಿ ಸರ್ಜಿಕಲ್ ಸ್ಟ್ರೈಕ್ ಕುರಿತು ಪ್ರಸ್ತಾಪಿಸಿ ದೇಶದ ಸೈನಿಕರ ಕಾರ್ಯವನ್ನು ಪ್ರಶಂಸಿಸಿದ್ದರು. ದೀಪಾವಳಿ ಸಂಭ್ರಮದ ದಿನವಾದ ಇಂದೂ ಕೂಡ ಕಾರ್ಯಕ್ರಮದಲ್ಲಿ ಮೋದಿ ಸೈನಿಕರನ್ನು ಸ್ಮರಿಸಿದ್ದಾರೆ. ಈ ದೀಪಾವಳಿಯನ್ನು ಯೋಧರಿಗೆ ಅರ್ಪಿಸುವುದಾಗಿ ತಿಳಿಸಿದ್ದಾರೆ. 'ದೇಶದ ಗಡಿ ಕಾಯುತ್ತಿರುವ ಸೇನಾ ಪಡೆಗೆ ಈ ದೀಪಾವಳಿ ಅರ್ಪಿಸುತ್ತೇನೆ. ದೇಶದ ಜನರಿಗಾಗಿ ಯೋಧರು ಪರ್ವತ, ಮರುಭೂಮಿ ಸೇರಿದಂತೆ ದುರ್ಗಮ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡುತ್ತಿದ್ದಾರೆ. ಆದ್ದರಿಂದ ಈ ದೀಪಾವಳಿಯನ್ನು ಯೋಧರ ಹೆಸರಲ್ಲಿ ಆಚರಿಸಬೇಕು' ಎಂದು ಮೋದಿ ಜನರಿಗೆ ಮನವಿ ಮಾಡಿದರು.
ಹಗಲಿರುಳು ದೇಶವನ್ನು ಕಾಯುತ್ತಿರುವ ಯೋಧರಿಗೆ ಪ್ರೋತ್ಸಾಹ ನೀಡಲು ದೇಶದ ಜನ #Sandesh2Soldiers ಅಡಿಯಲ್ಲಿ ಮೆಸೇಜ್ ಕಳುಹಿಸಿದ್ದನ್ನು ಮೋದಿ ನೆನೆದರು. ದೀಪಾವಳಿ ಸಂಭ್ರಮದಲ್ಲಿ ಪಟಾಕಿಯಿಂದಾಗುವ ಅನಾಹುತಗಳನ್ನು ತಪ್ಪಿಸುವ ಕುರಿತು ಮೋದಿ ಮಾತನಾಡಿದ್ದಾರೆ. ಮಕ್ಕಳು ಸುರಕ್ಷಿತವಾಗಿ ಪಟಾಕಿ ಹಚ್ಚುವುದನ್ನು ಪೋಷಕರು ಗಮನಿಸಬೇಕಿದೆ. ಕೆಲವು ಯುವಕರು ಪಟಾಕಿ ಜೊತೆ ಆಟವಾಡುತ್ತಾರೆ. ಇದು ನಮ್ಮನ್ನು ಚಿಂತೆಗೀಡುಮಾಡಿದೆ ಎಂದು ಕಳವಳ ವ್ಯಕ್ತಪಡಿಸಿದರು.
ದೀಪಾವಳಿ ಜನರನ್ನು ಒಟ್ಟುಗೂಡಿಸುವ ಹಬ್ಬ. ಇಂದು ದೇಶದ ಪ್ರತಿ ಮನೆಯೂ ಸ್ವಚ್ಛವಾಗಿರುತ್ತದೆ. ಹಾಗೆಯೇ ನಮ್ಮ ಸುತ್ತಮುತ್ತಲಿನ ಪ್ರದೇಶದಲ್ಲೂ ಜನ ಸ್ವಚ್ಛತೆ ಕಾಪಾಡುವುದು ಅವಶ್ಯಕ ಎಂದು ಮೋದಿ ಕರೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.