ಯೋಧರ ಜತೆ ಪ್ರಧಾನಿ ಮೋದಿ 5ನೇ ದೀಪಾವಳಿ

By Web DeskFirst Published Nov 8, 2018, 8:03 AM IST
Highlights

ಯೋಧರ ಜೊತೆ ಪ್ರಧಾನಿ ನರೇಂದ್ರ ಮೋದಿ ದೀಪಾವಳಿ ಆಚರಿಸಿದ್ದಾರೆ.  ಇಂಡೋ-ಚೀನಾ ಗಡಿಯಲ್ಲಿ ಸಿಹಿ ತಿನ್ನಿಸಿ ಯೋಧರ ಹುರಿದುಂಬಿಸಿದ ಪ್ರಧಾನಿ ಮೋದಿ, ಬಳಿಕ ಕೇದಾರನಾಥಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ.
 

ಉತ್ತರಕಾಶಿ(ನ.08):  ಪ್ರಧಾನಿ ನರೇಂದ್ರ ಮೋದಿ ಅವರು ಸತತ 5ನೇ ಬಾರಿಗೆ ದೀಪಾವಳಿಯನ್ನು ಯೋಧರ ಜತೆ ಆಚರಿಸಿಕೊಂಡರು. ಈ ಸಲ ಅವರು ಭಾರತ-ಚೀನಾ ಗಡಿ ಇರುವ ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಹರ್ಷಿಲ್‌ ವಲಯಕ್ಕೆ ಭೇಟಿ ನೀಡಿ, ಅಲ್ಲಿರುವ ಇಂಡೋ-ಟಿಬೆಟನ್‌ ಗಡಿ ಪಡೆ (ಐಟಿಬಿಪಿ) ಯೋಧರ ಜತೆ ದೀಪಾವಳಿ ಆಚರಿಸಿ ಅವರಿಗೆ ಸಿಹಿ ತಿನ್ನಿಸಿದರು.

ಇದಾದ ಬಳಿಕ ಅವರು ಭಗವಾನ್‌ ಭೋಲೇನಾಥನ ಸುಪ್ರಸಿದ್ಧ ತಾಣವಾದ ಕೇದಾರನಾಥಕ್ಕೆ ಭೇಟಿ ನೀಡಿ, ಶಿವಲಿಂಗದ ದರ್ಶನ ಪಡೆದರು. ಅಲ್ಲದೆ, 2013ರಲ್ಲಿ ಪ್ರವಾಹದಿಂದ ತತ್ತರಿಸಿದ್ದ ಕೇದಾರನಾಥ ಮರುನಿರ್ಮಾಣಕ್ಕೆ ಕೈಗೊಂಡಿರುವ ಕಾಮಗಾರಿಗಳನ್ನು ಪರಿಶೀಲಿಸಿದರು.

ಯೋಧರ ಬಗ್ಗೆ ಪ್ರಶಂಸೆ:
ಬುಧವಾರ ಬೆಳಗ್ಗೆ ಭಾರತ-ಚೀನಾ ಗಡಿಯಲ್ಲಿರುವ, ಸಮುದ್ರ ಮಟ್ಟದಿಂದ 7,860 ಅಡಿ ಮೇಲಿರುವ ಹರ್ಷಿಲ್‌ ವಲಯಕ್ಕೆ ಮೋದಿ ಯೋಧರ ದಿರಿಸು ಧರಿಸಿ ಭೇಟಿ ನೀಡಿದರು. ಅಲ್ಲಿ ಐಟಿಬಿಪಿ ಯೋಧರಿಗೆ ದೀಪಾವಳಿ ಸಿಹಿ ತಿನ್ನಿಸಿ ಮಾತನಾಡಿದ ಮೋದಿ ಅವರು, ‘ನೀವು ನಮ್ಮ ಗಡಿಯ ಒಂದು ಭಾಗವನ್ನು ಮಾತ್ರ ರಕ್ಷಣೆ ಮಾಡುತ್ತಿಲ್ಲ. ಇದರ ಬದಲಾಗಿ ಇಡೀ ದೇಶದ 125 ಕೋಟಿ ಜನರನ್ನು ರಕ್ಷಣೆ ಮಾಡುತ್ತಿದ್ದೀರಿ’ ಎಂದು ಕೊಂಡಾಡಿದರು.

‘ದೀಪಾವಳಿಯ ದೀಪದ ಹಣತೆಯು ತಾನು ಉರಿದು ಹೋಗುತ್ತಾದರೂ ಸುತ್ತಲೂ ಬೆಳಕು ನೀಡುತ್ತದೆ. ಅದೇ ರೀತಿ ಯೋಧರು. ತಾವು ಕಷ್ಟಅನುಭವಿಸುತ್ತಿದ್ದರೂ, ಇತರರು ನಿರ್ಭೀತಿಯಿಂದ ನೆಲೆಸಲು ಅನುವು ಮಾಡಿಕೊಡುತ್ತಾರೆ’ ಎಂದು ಭಾವಪರವಶರಾಗಿ ನುಡಿದರು.

‘ಯೋಧರ ಜತೆ ನನ್ನ ಒಡನಾಟ ಆರೆಸ್ಸೆಸ್‌ ದಿನಗಳಿಂದಲೇ ಇದೆ. ಸಂಘದ ಸದಸ್ಯನಾಗಿ ನಾನು ಯೋಧರ ಜತೆಗೆ ಕಾಲ ಕಳದಿದ್ದೆ. ಹೀಗಾಗಿಯೇ ಅವರ ಕಷ್ಟ-ಸುಖಗಳು ನನಗೆ ಗೊತ್ತು. ಅದಕ್ಕೆಂದೇ 40 ವರ್ಷದಿಂದ ನನೆಗುದಿಗೆ ಬಿದ್ದಿದ್ದ ಏಕ ಶ್ರೇಣಿ-ಏಕ ಪಿಂಚಣಿಯನ್ನು ನಾನು ಜಾರಿಗೊಳಿಸಿದೆ. ಯೋಜನೆ ಜಾರಿಗೆ ಬೇಕಿದ್ದ 12 ಸಾವಿರ ಕೋಟಿ ರುಪಾಯಿ ಸರ್ಕಾರಕ್ಕೆ ಹೊರೆಯಾದರೂ, ಈಗಾಗಲೇ 11 ಸಾವಿರ ಕೋಟಿ ರುಪಾಯಿಯನ್ನು ಬಿಡುಗಡೆ ಮಾಡಲಾಗಿದೆ’ ಎಂದು ಮೋದಿ ಹೇಳಿದರು.

ಮೋದಿ ಅವರು ಯೋಧರ ಜತೆ ಸುಮಾರು 1.15 ತಾಸು ಕಾಲ ಕಳೆದರು. ಅಲ್ಲಿಂದ ಸನಿಹದಲ್ಲಿರುವ ಗಡಿಯ ಬಾಗೋರಿ ಗ್ರಾಮಸ್ಥರನ್ನು ಭೇಟಿ ಮಾಡಿದರು. ಹರ್ಷಿಲ್‌ನಲ್ಲಿರುವ ಗಂಗಾನದಿಯ ಉಪನದಿಯಾದ ಭಾಗೀರಥಿ ನದಿ ದಂಡೆಯಲ್ಲೂ ಪ್ರಾರ್ಥನೆ ಸಲ್ಲಿಸಿದರು.

ಕೇದಾರನಾಥಕ್ಕೆ ಭೇಟಿ:
ಇದಾದ ಬಳಿಕ ಸಂಜೆ ಶ್ರೀ ಕ್ಷೇತ್ರ ಕೇದಾರನಾಥಕ್ಕೆ ಆಗಮಿಸಿದ ಮೋದಿ ಅವರು, ಕೇದಾರದಲ್ಲಿ 2013ರ ಪ್ರವಾಹದ ಹಿನ್ನೆಲೆಯಲ್ಲಿ ನಡೆದಿರುವ ಮರುನಿರ್ಮಾಣ ಕಾರ್ಯಗಳ ಪ್ರಗತಿ ಪರಿಶೀಲನೆ ನಡೆಸಿದರು.

ಕೇದಾರನಾಥ ದೇವಾಲಯ ಸುತ್ತಮುತ್ತ ಹಾಗೂ ದೇವಾಲಯದ ಸನಿಹವಿರುವ ಕೇದಾರಪುರಿ ಪಟ್ಟಣಗಳ ಮರುನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಆ ಸ್ಥಳಗಳಿಗೆ ಭೇಟಿ ನೀಡಿ ಅವಲೋಕನ ಮಾಡಿದರು. ಇದೇ ವೇಳೆ, ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿ ಶಿವಲಿಂಗಕ್ಕೆ ಪೂಜೆ ಸಲ್ಲಿಸಿದರು. ಈ ವೇಳೆ ಮೋದಿ ಅವರ ಹಣೆಗೆ ಅರ್ಚಕರು ಭಸ್ಮ-ಗಂಧಗಳನ್ನು ಹಚ್ಚಿ ಗೌರವಿಸಿದರು.

ಯೋಧರ ಜತೆ 5ನೇ ದೀಪಾವಳಿ

  • 2014: ಸಿಯಾಚಿನ್‌ನಲ್ಲಿ ಯೋಧರ ಜತೆ ದೀಪಗಳ ಹಬ್ಬ
  • 2015: ಪಂಜಾಬ್‌ ಗಡಿಗೆ ಭೇಟಿ
  • 2016: ಹಿಮಾಚಲ ಪ್ರದೇಶದ ಭಾರತ-ಟಿಬೆಟ್‌ ಗಡಿಯಲ್ಲಿ ಐಟಿಬಿಪಿ ಯೋಧರ ಜತೆ ದೀಪಾವಳಿ
  • 2017: ಜಮ್ಮು-ಕಾಶ್ಮೀರದ ಗುರೇಜ್‌ ವಲಯದಲ್ಲಿ ಸೈನಿಕರ ಜತೆ ಬೆಳಕಿನ ಹಬ್ಬ
  • 2018: ಭಾರತ-ಚೀನಾ ಗಡಿಯ ಹರ್ಷಿಲ್‌ನಲ್ಲಿ ಐಟಿಬಿಪಿ ಜವಾನರ ಜತೆ ಹಬ್ಬಾಚರಣೆ
click me!