ಸಚಿವರಿಗೆ ಮೋದಿ ರಿಯಾಲಿಟಿ ಚೆಕ್

By Suvarna Web DeskFirst Published Feb 12, 2017, 8:40 PM IST
Highlights

ಸಚಿವರು ತಮ್ಮ ಕ್ಷೇತ್ರದಿಂದಾಚೆಗೂ ಭೇಟಿ ನೀಡಿ, ಸರ್ಕಾರ ಯೋಜನೆಗಳು ಅದರಲ್ಲೂ ವಿಶೇಷವಾಗಿ ಅಪನಗದೀಕರಣ ಕುರಿತು ಜಾಗೃತಿ ಮೂಡಿಸಿದ್ದಾರಾ? ಎಂಬುದನ್ನು ಅರಿಯುವ ಕ್ರಮ ಇದಾಗಿದೆ ಎಂದು ಹೇಳಲಾಗಿದೆ.

ನವದೆಹಲಿ(ಫೆ.13): ದೇಶದ ವಿವಿಧ ಭಾಗಕ್ಕೆ ತೆರಳಿ ಅಪನಗದೀಕರಣದ ಪ್ರಯೋಜನ ಕುರಿತು ಜಾಗೃತಿ ಮೂಡಿಸುವಂತೆ ನೀಡಲಾಗಿದ್ದ ಸೂಚನೆಯನ್ನು ಸಚಿವರು ಪಾಲಿಸಿದ್ದಾರೆಯೇ? ಇಲ್ಲವೇ? ಎಂಬುದನ್ನು ಪತ್ತೆ ಹಚ್ಚಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ. ಹೀಗಾಗಿ, ಕಳೆದ ಮೂರು ತಿಂಗಳ ಅವಧಿಯಲ್ಲಿ ಕೈಗೊಂಡ ಪ್ರವಾಸ ವಿವರಗಳನ್ನು ಸೋಮವಾರದೊಳಗೆ ನೀಡುವಂತೆ ಕೇಂದ್ರ ಮಂತ್ರಿಗಳಿಗೆ ನಿರ್ದೇಶನ ನೀಡಿದ್ದಾರೆ.

ನೋಟು ರದ್ದತಿ ಹಾಗೂ ಕೇಂದ್ರ ಸರ್ಕಾರದ ಮತ್ತಿತರೆ ಕ್ರಮಗಳ ಕುರಿತಾದ ಕಾರ್ಯಕ್ರಮಗಳಲ್ಲಿ ಸಚಿವರು ಭಾಗಿಯಾಗಿದ್ದಾರೆಯೇ ಎಂಬುದನ್ನು ತಿಳಿಯುವ ಉದ್ದೇಶ ಪ್ರಧಾನಿಯವರದ್ದಾಗಿದೆ. ಹಾಗಾಗಿ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಚಿವರಿಂದ ಪ್ರವಾಸ ವಿವರ ಕೇಳಲಾಗಿದೆ. ಈ ವಿಚಾರದಲ್ಲಿ ಸಮನ್ವಯ ಸಾಧಿಸುವ ಹೊಣೆಯನ್ನು ಗ್ರಾಮೀಣಾಭಿವೃದ್ಧಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಅವರಿಗೆ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಎಲ್ಲ ಸಚಿವರು ಮೂರು ತಿಂಗಳ ಅವಧಿಯಲ್ಲಿನ ತಮ್ಮ ಪ್ರವಾಸ ವಿವರವನ್ನು ಒದಗಿಸಬೇಕು. ಒಂದು ವೇಳೆ ಯಾವುದೇ ರಾಜ್ಯಕ್ಕೂ ತೆರಳಿಲ್ಲ ಎಂದಾದರೆ, ದೆಹಲಿಯಲ್ಲೇ ಇದ್ದು, ಕಚೇರಿಗೆ ಹಾಜರಾದ ಕುರಿತು ಮಾಹಿತಿ ಒದಗಿಸಬೇಕು ಎಂದು ನಿರ್ದೇಶನ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.

ಸಚಿವರು ತಮ್ಮ ಕ್ಷೇತ್ರದಿಂದಾಚೆಗೂ ಭೇಟಿ ನೀಡಿ, ಸರ್ಕಾರ ಯೋಜನೆಗಳು ಅದರಲ್ಲೂ ವಿಶೇಷವಾಗಿ ಅಪನಗದೀಕರಣ ಕುರಿತು ಜಾಗೃತಿ ಮೂಡಿಸಿದ್ದಾರಾ? ಎಂಬುದನ್ನು ಅರಿಯುವ ಕ್ರಮ ಇದಾಗಿದೆ ಎಂದು ಹೇಳಲಾಗಿದೆ.

click me!