ಮತಾಂತರಿ ಎನ್‌ಜಿಒಗಳಿಗೆ ಇನ್ನು ವಿದೇಶಿ ದೇಣಿಗೆ ಸಿಗಲ್ಲ!

By Web DeskFirst Published Sep 18, 2019, 10:56 AM IST
Highlights

ಮತಾಂತರಿ ಎನ್‌ಜಿಒಗಳಿಗೆ ಇನ್ನು ವಿದೇಶಿ ದೇಣಿಗೆ ಸಿಗಲ್ಲ| ದೇಣಿಗೆ ಬೇಕೆಂದರೆ ಮತಾಂತರ ಕೇಸಿಲ್ಲ ಎಂದು ಘೋಷಿಸಿಕೊಳ್ಳಬೇಕು| ಕೇಂದ್ರ ಗೃಹ ಸಚಿವಾಲಯದಿಂದ ಅಧಿಸೂಚನೆ

ನವದೆಹಲಿ[ಸೆ.18]: ವಿದೇಶದಿಂದ ಅಪಾರ ದೇಣಿಗೆ ಪಡೆದು ಮತಾಂತರ ನಡೆಸುತ್ತಿವೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎನ್‌ಜಿಒಗಳಿಗೆ (ಸರ್ಕಾರೇತರ ಸ್ವಯಂಸೇವಾ ಸಂಸ್ಥೆಗಳು) ಮೂಗುದಾರ ಹಾಕಿದೆ. ಯಾವುದೇ ಎನ್‌ಜಿಒ ವಿದೇಶದಿಂದ ದೇಣಿಗೆ ಪಡೆಯಲು ಬಯಸಿದಲ್ಲಿ, ಮತಾಂತರ ಆರೋಪ ಸಂಬಂಧ ತಮ್ಮ ವಿರುದ್ಧ ವಿಚಾರಣೆ ನಡೆದಿಲ್ಲ ಅಥವಾ ಅಂತಹ ಪ್ರಕರಣದಲ್ಲಿ ತಾವು ಈ ಹಿಂದೆ ದೋಷಿಯೂ ಆಗಿಲ್ಲ ಎಂದು ಎನ್‌ಜಿಒದ ಪ್ರತಿಯೊಬ್ಬ ನೌಕರ ಹಾಗೂ ಅಧಿಕಾರಿಗಳು ಕಡ್ಡಾಯವಾಗಿ ಘೋಷಣೆ ಮಾಡಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.

ಈ ಕುರಿತು ಕೇಂದ್ರ ಗೃಹ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರ ಹಾಗೂ ಕೋಮುಗಲಭೆ, ಅಸೌಹಾರ್ದತೆ ಸೃಷ್ಟಿಆರೋಪ ಸಂಬಂಧ ವಿಚಾರಣೆ ಎದುರಿಸಿಲ್ಲ ಎಂದು ಎನ್‌ಜಿಒಗಳ ಪ್ರತಿ ಪದಾಧಿಕಾರಿ, ಅಧಿಕಾರಿ, ನೌಕರರು ಘೋಷಣೆ ಮಾಡಿಕೊಳ್ಳುವುದು ಕಡ್ಡಾಯ ಎಂದು ಅಧಿಸೂಚನೆ ತಿಳಿಸಿದೆ. ಈವರೆಗೆ ಎನ್‌ಜಿಒದ ಓರ್ವ ನಿರ್ದೇಶಕ ಮಾತ್ರ ಈ ರೀತಿಯ ಘೋಷಣೆ ಮಾಡಿಕೊಂಡಿದ್ದರೆ ಸಾಕಿತ್ತು.

ಮತ್ತೊಂದೆಡೆ, ದೇಶದ್ರೋಹ ಅಥವಾ ಹಿಂಸಾ ಮಾರ್ಗವನ್ನು ಪ್ರಚುರಪಡಿಸಿಲ್ಲ ಹಾಗೂ ವಿದೇಶಿ ದೇಣಿಗೆಯನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಂಡಿಲ್ಲ ಎಂದು ಎನ್‌ಜಿಒದ ಪ್ರತಿಯೊಬ್ಬ ಸದಸ್ಯರೂ ಘೋಷಣೆ ಮಾಡಿಕೊಳ್ಳಬೇಕು ಎಂದೂ ಸೂಚನೆ ನೀಡಿದೆ.

click me!