500 ರು.ನ ಮೋದಿ ಸ್ಮರಣಿಕೆ 1 ಕೋಟಿ ರು.ಗೆ ಬಿಕರಿ!| ಗುಜರಾತ್ ಸಿಎಂ ಗಿಫ್ಟ್ ನೀಡಿದ್ದ ಬೆಳ್ಳಿ ಕಳಸಕ್ಕೂ 1 ಕೋಟಿ ರು. ಬೆಲೆ| ಮೋದಿಗೆ ಉಡುಗೊರೆಯಾಗಿ ಬಂದ ವಸ್ತುಗಳ ಹರಾಜಿಗೆ ಭಾರಿ ಸ್ಪಂದನೆ
ನವದೆಹಲಿ[ಸೆ.18]: ಕಳೆದ ಆರು ತಿಂಗಳ ಅವಧಿಯಲ್ಲಿ ವಿವಿಧ ರಾಜ್ಯಗಳಿಗೆ ಭೇಟಿ ನೀಡಿದಾಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೊರೆತ ಉಡುಗೊರೆ ಸಾಮಗ್ರಿಗಳನ್ನು ಇ-ಹರಾಜು ಹಾಕುವ ಪ್ರಕ್ರಿಯೆ ನಡೆಯುತ್ತಿದ್ದು, ಭಾರಿ ಸ್ಪಂದನೆ ವ್ಯಕ್ತವಾಗಿದೆ. ಮೋದಿ ಅವರು ನಿಂತಿರುವ ಭಂಗಿಯಲ್ಲಿನ ಚಿತ್ರ ಹಾಗೂ ಗುಜರಾತಿ ಭಾಷೆಯ ಸಂದೇಶ ಹೊಂದಿರುವ ಸ್ಮರಣಿಕೆಯೊಂದು ಬರೋಬ್ಬರಿ 1 ಕೋಟಿ ರು.ಗೆ ಬಿಕರಿಯಾಗಿದೆ. ಹರಾಜು ಆಯೋಜಕರು ಇದಕ್ಕೆ ಕೇವಲ 500 ರು. ಮೂಲ ಬೆಲೆ ನಿಗದಿಪಡಿಸಿದ್ದರು!
ಮೋದಿ ಅವರಿಗೆ ಆರು ತಿಂಗಳ ಅವಧಿಯಲ್ಲಿ ಒಟ್ಟು 2772 ಉಡುಗೊರೆಗಳು ಬಂದಿವೆ. ಇವನ್ನು ದೆಹಲಿಯ ರಾಷ್ಟ್ರೀಯ ಮಾಡರ್ನ್ ಆರ್ಟ್ ಗ್ಯಾಲರಿಯಲ್ಲಿ ಹರಾಜು ಹಾಕಲಾಗುತ್ತಿದೆ. ಮೋದಿ ಅವರ ಸ್ಮರಣಿಕೆ 1 ಕೋಟಿ ರು.ಗೆ ಸೋಮವಾರ ಬಿಕರಿಯಾಗಿದೆ.
undefined
ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಕೆಲ ತಿಂಗಳ ಹಿಂದೆ ಮೋದಿ ಅವರಿಗೆ ಬೆಳ್ಳಿಯ ಕಳಸವನ್ನು ಉಡುಗೊರೆಯಾಗಿ ನೀಡಿದ್ದರು. ಇದಕ್ಕೆ 18 ಸಾವಿರ ರು. ಮೂಲಬೆಲೆ ನಿಗದಿಪಡಿಸಲಾಗಿತ್ತು. ವಿಶೇಷ ಎಂದರೆ, ಅದೂ 1 ಕೋಟಿ ರು.ಗೆ ಮಾರಾಟವಾಗಿದೆ.
ಹಸು ತನ್ನ ಕರುವಿಗೆ ಹಾಲುಣಿಸುತ್ತಿರುವ ಲೋಹದ ಕಲಾಕೃತಿಯೊಂದಕ್ಕೆ 1500 ರು. ಮೂಲಬೆಲೆ ಇದ್ದರೂ, 51 ಲಕ್ಷ ರು.ಗೆ ಬಿಕರಿಯಾಗಿದೆ. ಸೆ.14ರಿಂದ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಅ.3ರವರೆಗೆ ಮುಂದುವರಿಯಲಿದೆ.
ಖಡ್ಗ, ಪಗಡಿ, ಪೇಂಟಿಂಗ್ಸ್, ಶಾಲು, ವಿವಿಧ ಕಲಾವಿದರು ಬರೆದಿರುವ ಮೋದಿ ಅವರ ಸಹಸ್ರಾರು ಚಿತ್ರಗಳನ್ನು ಮಾಡರ್ನ್ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶನಕ್ಕಿಡಲಾಗಿದೆ. ಕೆಲವು ವಸ್ತುಗಳಿಗೆ 200ರಿಂದ 2.5 ಲಕ್ಷ ರು.ವರೆಗೂ ಮೂಲಬೆಲೆ ನಿಗದಿಪಡಿಸಲಾಗಿದೆ. ಸೀಮತ್ತಿ ಟೆಕ್ಸ್‌ಟೈಲ್ಸ್‌ನ ಮಾಲೀಕರಾದ ಬೀನಾ ಕಣ್ಣನ್ ಅವರು ರೇಷ್ಮೆಯಲ್ಲಿ ಮೋದಿ ಚಿತ್ರ ರಚಿಸಿ ಉಡುಗೊರೆ ಕೊಟ್ಟಿದ್ದರು. ಅದಕ್ಕೆ 2.5 ಲಕ್ಷ ರು. ಬೆಲೆ ನಿಗದಿಯಾಗಿದೆ. ಪಿಛ್‌ವಾಯಿ ಮಾದರಿಯ ಮೋದಿ ಭಾವಚಿತ್ರಕ್ಕೆ 2 ಲಕ್ಷ ರು. ಬೆಲೆ ಇದೆ. ನ್ಯಾಷನಲ್ ಇನ್‌ಫಾರ್ಮಾಟಿಕ್ಸ್ ಸೆಂಟರ್ ವಿನ್ಯಾಸಗೊಳಿಸಿರುವ ವೆಬ್‌ಸೈಟ್‌ನಲ್ಲಿ ಮೋದಿ ವಸ್ತುಗಳ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಯಾರು ಬೇಕಾದರೂ ಪಾಲ್ಗೊಳ್ಳಬಹುದಾಗಿದೆ.