ಎಲ್ಲಾ ದಾಖಲೆಗಳು ಒಂದೇ ಕಾರ್ಡ್ ನಲ್ಲಿ/ ನೂರೆಂಟು ಕಾರ್ಡ್ ಬಿಡಿ ಒಂದು ಮಲ್ಟಿ ಪರ್ಪಸ್ ಕಾರ್ಡ್ ಮಾಡಿಕೊಳ್ಳಿ/ ಕೇಂದ್ರ ಸರ್ಕಾರದ ಹೊಸ ಆಲೋಚನೆ ಬಿಚ್ಚಿಟ್ಟ ಗೃಹ ಸಚಿವ ಅಮಿತ್ ಶಾ
ನವದೆಹಲಿ(ಸೆ. 23) ದಾಖಲೆಗಳನ್ನು ಮತ್ತಷ್ಟು ಸರಳೀಕರಣ ಮಾಡಲು ಕೇಂದ್ರ ಚಿಂತನೆ ಮಾಡಿದೆ. ಆಧಾರ್, ಡ್ರೈವಿಂಗ್ ಲೈಸನ್ಸ್, ಬ್ಯಾಂಕ್ ಖಾತೆ ಎಲ್ಲವನ್ನು ಒಂದೇ ಕಡೆಯಲ್ಲಿ ನೀಡುವ ಬಹು ಉಪಯೋಗಿ ಗುರುತಿನ ಪತ್ರವೊಂದನ್ನು ನಾಗರಿಕರಿಗೆ ನೀಡುವ ಆಲೋಚನೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಂದಿಟ್ಟಿದ್ದಾರೆ.
ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡಿದ ಅಮಿತ್ ಶಾ, ಆಧಾರ್, ಬ್ಯಾಂಕ್ ಖಾತೆ, ಮತದಾರರ ಗುರುತಿನ ಪತ್ರ ಸೇರಿದಂತೆ ಸರ್ಕಾರದಿಂದ ಕೊಡಮಾಡಲಾದ ಎಲ್ಲಾ ದಾಖಲೆಗಳನ್ನು ಒಂದೇ ಕಾರ್ಡ್ ಅಡಿ ಯಾಕೆ ತರಬಾರದು ಎಂದು ಪ್ರಶ್ನೆ ಮಾಡಿದ್ದಾರೆ. ದೇಶದಲ್ಲಿ ಡಿಜಿಟಲ್ ಗಣತಿ ಸಹ ಅಷ್ಟೇ ಮುಖ್ಯವಾಗುತ್ತದೆ ಎಂದು ಪ್ರತಿಪಾದಿಸಿದ್ದಾರೆ.
ಬ್ಯಾಂಕ್, ಪೋಸ್ಟ್ ಆಫೀಸ್‌ನಲ್ಲೂ ಆಧಾರ್ ನೋಂದಣಿ, ತಿದ್ದುಪಡಿ
ನವದೆಹಲಿಯಲ್ಲಿ ರಜಿಸ್ಟರ್ ಜನರಲ್ ಆಫ್ ಇಂಡಿಯಾ ಮತ್ತು ಚುನಾವಣಾ ಕಮಿಷನರ್ ಕಚೇರಿಗೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಮಾತನಾಡಿದ ಶಾ, 2021ರ ಜನಗಣತಿಯನ್ನು ಮೊಬೈಲ್ ಆಪ್ ಬಳಸಿ ಮಾಡಲಾಗುವುದು. ಇದು ದೇಶದಲ್ಲಿಯೇ ಒಂದು ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಗಲಿದೆ ಎಂದರು.
ಯಾರಾದರೂ ನಿಧನರಾದರೆ ಆ ಡಾಟಾ ಆಟೋಮ್ಯಾಟಿಕ್ ಆಗಿ ಅಪ್ ಡೇಟ್ ಆಗುವಂತಹ ವ್ಯವಸ್ಥೆಗೂ ಚಿಂತನೆ ನಡೆದಿದೆ. ಪ್ರಜಾಪ್ರಭುತ್ವ ಕಾಪಾಡಲು ಮತ್ತು ದೇಶದ ಬೆಳವಣಿಗೆ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಜನಗಣತಿ ಆಧಾರವಾಗಲಿದೆ ಎಂದು ಶಾ ತಿಳಿಸಿದರು.