ಪ್ರವಾಸಿಗರು ಕುಡಿದು ಬಿಸಾಡಿದ ಬಾಟಲಿಯಲ್ಲಿ ಮಿರಿಂಡಾ ಕುಡಿಯಲು ಹೋಗಿ ತಲೆಸಿಕ್ಕಿಸಿಕೊಂಡ ಕೆರೆ ಹಾವು ದಾರಿ ಕಾಣದೆ ಕಂಗಾಲಾದ ಘಟನೆ ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಗ್ರಾಮದಲ್ಲಿ ನಡೆದಿದೆ.
ಚಿಕ್ಕಮಗಳೂರು (ಮೇ. 21): ಪ್ರವಾಸಿಗರು ಕುಡಿದು ಬಿಸಾಡಿದ ಬಾಟಲಿಯಲ್ಲಿ ಮಿರಿಂಡಾ ಕುಡಿಯಲು ಹೋಗಿ ತಲೆಸಿಕ್ಕಿಸಿಕೊಂಡ ಕೆರೆ ಹಾವು ದಾರಿ ಕಾಣದೆ ಕಂಗಾಲಾದ ಘಟನೆ ತಾಲೂಕಿನ ಮಲ್ಲಂದೂರ ಗ್ರಾಮದಲ್ಲಿ ನಡೆದಿದೆ.
ರಸ್ತೆ ಬದಿಯಲ್ಲಿದ್ದ ಬಾಟಲಿಗೆ ತಲೆಹಾಕಿದ ಕೆರೆಹಾವು ತಲೆಯನ್ನ ಹೊರತೆಗೆಯಲಾಗದೆ ಸುಮಾರು ಅರ್ಧ ಗಂಟೆಗಳ ಕಾಲ ರಸ್ತೆ ಬದಿಯಲ್ಲೇ ಹೋರಾಟ ನಡೆಸಿದೆ. ಆದರೂ ಹಾವಿಗೆ ತಲೆ ಹೊರತೆಗೆಯಲು ಸಾಧ್ಯವಾಗಿಲ್ಲ. ರಸ್ತೆಯಲ್ಲಿ ಬಿದ್ದು, ಹೊರಳಾಡಿ, ತಿಣುಕಾಡಿ ಏನೇ ಹರಸಾಹಸಪಟ್ಟರೂ ಹಾವಿಗೆ ತಲೆಯನ್ನ ತೆಗೆಯಲು ಸಾಧ್ಯವಾಗಿಲ್ಲ.
ಇದೇ ವೇಳೆ, ಚಿಕ್ಕಮಗಳೂರಿನಿಂದ ಮಲ್ಲಂದೂರಿಗೆ ಹೋಗ್ತಿದ್ದ ವೈಲ್ಡ್ ಕ್ಯಾಟ್ ಸಿ ಮುಖ್ಯಸ್ಥ ಶ್ರೀದೇವ್ ಹಾವನ್ನ ಕಂಡು ಪತ್ನಿಯ ಜೊತೆಗೂಡಿ ಹಾವಿನ ತಲೆಯನ್ನ ಬಾಟಲಿಯಿಂದ ಹೊರತೆಗೆದಿದ್ದಾರೆ. ಶ್ರೀದೇವ್ ಅವರ ಪತ್ನಿ, ಉದ್ದವಾದ ಕೋಲಿನಿಂದ ಹಾವಿ ತಲೆ ಮೇಲಿದ್ದ ಬಾಟಲಿಗೆ ಒತ್ತಿ ಹಿಡಿದಿದ್ದಾರೆ. ಇದೇ ವೇಳೆ, ಶ್ರೀದೇವ್ ಹಾವಿನ ಬಾಲ ಹಿಡಿದು ಎಳೆದಿದ್ರಿಂದ ಹಾವು ಹೊರಬಂದಿದೆ. ಮನುಷ್ಯರನ್ನ ಕಂಡ್ರೆ ಎದ್ನೋ-ಬಿದ್ನೋ ಅಂತ ಓಡುವ ಕೆರೆಹಾವು ಬಾಟಲಿಯಿಂದ ಹೊರ ಬಂದ ಕೂಡಲೇ ಬದುಕಿದೆಯಾ ಬಡಜೀವವೇ ಎಂದು ಓಡಿ ಹೋಗಿದೆ.