ಗಂಭೀರ ಚರ್ಚೆಗೆ ಸಿದ್ಧವೆಂದ ಪ್ರಧಾನಿ ಮೋದಿ

By Web DeskFirst Published Dec 11, 2018, 7:35 AM IST
Highlights

ಪ್ರಧಾನಿ ನರೇಂದ್ರ ಮೋದಿ ಮಹತ್ವದ ಚರ್ಚೆಗಳಿಗೆ ಸಿದ್ಧವಾಗಿದ್ದಾಗಿ ಹೇಳಿದ್ದಾರೆ. ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಈ ವೇಳೆ ವಿಪಕ್ಷಗಳ ಪ್ರಶ್ನೆ ಉತ್ತರ ನೀಡಲು ಸಿದ್ಧ ಎಂದಿದ್ದಾರೆ. 

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ಮಂಗಳವಾರದಿಂದ ಆರಂಭವಾಗಲಿದ್ದು, ‘ಚಳಿ’ಗಿಂತ ಬಿಸಿಯೇರುವಿಕೆಯೇ ಹೆಚ್ಚಾಗುವ ಲಕ್ಷಣಗಳು ಇವೆ. ಅಧಿವೇಶನದಲ್ಲಿ ನನೆಗುದಿಗೆ ಬಿದ್ದಿರುವ ತ್ರಿವಳಿ ತಲಾಖ್‌ ಸೇರಿದಂತೆ ಮಹತ್ವದ ವಿಧೇಯಕಗಳನ್ನು ಅಂಗೀಕರಿಸಿಕೊಳ್ಳಲು ಸರ್ಕಾರ ಸಿದ್ಧತೆ ನಡೆಸಿದೆ.

ಆದರೆ, ರಿಸವ್‌ರ್‍ ಬ್ಯಾಂಕ್‌ ಗವರ್ನರ್‌ ಊರ್ಜಿತ್‌ ಪಟೇಲ್‌ ರಾಜೀನಾಮೆ, ರಫೇಲ್‌ ಯುದ್ಧ ವಿಮಾನ ಖರೀದಿ ಹಗರಣ, ಸಿಬಿಐ ಉನ್ನತ ಅಧಿಕಾರಿಗಳ ಕಚ್ಚಾಟ, ಕೇಂದ್ರದ ಮಾಜಿ ಸಚಿವ ಎಂ.ಜೆ. ಅಕ್ಬರ್‌ ವಿರುದ್ಧ ಕೇಳಿಬಂದ ಲೈಂಗಿಕ ದೌರ್ಜನ್ಯ ಪ್ರಕರಣ ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ಸಿದ್ಧತೆ ಮಾಡಿಕೊಂಡಿವೆ. ಇನ್ನು ವಿಜಯ್‌ ಮಲ್ಯ ಹಾಗೂ ಕ್ರಿಸ್ಟಿಯನ್‌ ಮಿಶೆಲ್‌ ಗಡೀಪಾರು ವಿಷಯಗಳನ್ನು ‘ನಗದೀಕರಣ’ ಮಾಡಿಕೊಂಡು ತಿರುಗೇಟು ನೀಡಲು ಸರ್ಕಾರ ಸಜ್ಜಾಗಿದೆ.

ಡಿಸೆಂಬರ್‌ 11ರಿಂದ ಜ.8ರವರೆಗೆ ಅಧಿವೇಶನ ನಡೆಯಲಿದೆ. ಚಳಿಗಾಲದ ಮೊದಲ ದಿನವಾದ ಮಂಗಳವಾರ ಕಲಾಪದಲ್ಲಿ ಇತ್ತೀಚೆಗಷ್ಟೇ ಅಗಲಿದ ಬಿಜೆಪಿ ನಾಯಕರಾದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಹಾಗೂ ಕೇಂದ್ರ ಸಚಿವರಾಗಿದ್ದ ಅನಂತ ಕುಮಾರ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ. ಅಲ್ಲದೆ, ಅದೇ ದಿನವೇ ಲೋಕಸಭೆ ಚುನಾವಣೆಯ ಸೆಮಿಫೈನಲ್‌ ಎಂದೇ ಹೇಳಲಾಗಿರುವ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬೀಳಲಿದ್ದು, ಕಲಾಪದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಈ ಕಲಾಪದಲ್ಲಿ ತ್ರಿವಳಿ ತಲಾಖ್‌ ಆಚರಣೆ ಮುಂದುವರಿಸಿದರೆ ಶಿಕ್ಷೆ ವಿಧಿಸುವ ಮಸೂದೆ, ಕಂಪನಿಗಳ ಕಾಯ್ದೆ ತಿದ್ದುಪಡಿ ಮಸೂದೆ, ಭಾರತೀಯ ವೈದ್ಯಕೀಯ ಮಂಡಳಿ ಕಾಯ್ದೆ ತಿದ್ದುಪಡಿ ಮಸೂದೆಗೆ ಅಂಗೀಕಾರ ಪಡೆಯುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಲ್ಲ ವಿಷಯಗಳ ಬಗ್ಗೆ ಚರ್ಚೆಗೆ ಸರ್ಕಾರ ಸಿದ್ಧವಿದೆ. ಸಾರ್ವಜನಿಕರ ಹಿತಾಸಕ್ತಿಗಾಗಿ ನಾವೆಲ್ಲ ಪರಸ್ಪರ ಸಹಕಾರದಿಂದ ಕಲಾಪ ನಡೆಯಲು ಅವಕಾಶ ನೀಡೋಣ.

- ನರೇಂದ್ರ ಮೋದಿ, ಪ್ರಧಾನಿ

click me!