
ಬೆಂಗಳೂರು(ನ.21) : ಶೈಕ್ಷಣಿಕವಾಗಿ ನೆರವಾಗಲೆಂದು ನೀಡಿರುವ ಅಂತರ್ಜಾಲದಲ್ಲಿ ಮಕ್ಕಳು ಅಶ್ಲೀಲ ಚಿತ್ರಗಳ ವೀಕ್ಷಣೆ ಮಾಡುತ್ತಿರುವುದು ಕಳವಳಕಾರಿಯಾಗಿದ್ದು,ಪೋಷಕರು ಮಕ್ಕಳ ನಡವಳಿಕೆ ಬಗ್ಗೆ ಎಚ್ಚರವಹಿಸುವ ಅಗತ್ಯವಿದೆ ಎಂದು ಈಷಾ ಫೌಂಡೇಷನ್ ಸಂಸ್ಥಾಪಕ ಜಗ್ಗಿ ವಾಸುದೇವ್ ಎಚ್ಚರಿಸಿದ್ದಾರೆ.
ನಗರದ ಗೋಕುಲ ಶಿಕ್ಷಣ ಪ್ರತಿಷ್ಠಾನ ನೂತನವಾಗಿ ನಿರ್ಮಾಣ ಮಾಡಿರುವ ‘ರಾಮಯ್ಯಇಂಡಿಕ್'ಸ್ಪೆಷಾಲಿಟಿ ಆಯುರ್ವೇದ ರೆಸ್ಟೋರೇಷನ್ ಆಸ್ಪತ್ರೆ’ಯ ಲೋಕಾರ್ಪಣೆ ಬಳಿಕ ರಾಮಯ್ಯ ತಾಂತ್ರಿಕ ಮಹಾವಿಶ್ವದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದರು. ದೇಶದಲ್ಲಿ ಪ್ರಸ್ತುತ ಶೇ.70 ರಷ್ಟು ಅಂತರ್ಜಾಲವು ಅಶ್ಲೀಲ ವೆಬ್‌ಸೈಟ್'ಗಳ ವೀಕ್ಷಣೆಗೆ ಬಳಕೆಯಾಗುತ್ತಿದ್ದು ಹದಿನೈದಕ್ಕಿಂತ ಕಡಿಮೆ ವಯಸ್ಸಿನವರು ಹೆಚ್ಚು ಪ್ರಮಾಣದಲ್ಲಿರುವುದು ಆತಂಕದ ವಿಷಯವಾಗಿದೆ. ಸಣ್ಣ ಮಕ್ಕಳು ಅಶ್ಲೀಲ ಚಿತ್ರಗಳ ವೀಕ್ಷಣೆ ಮಾಡುತ್ತಿರುವುದು ಅತ್ಯಂತ ಆಘಾತಕಾರಿಯಾಗಿದ್ದು, ಈ ಬಗ್ಗೆ ಪೋಷಕರು ಜಾಗೃತಿ ವಹಿಸಬೇಕು ಎಂದರು.
ಎಂಜಿನಿಯರಿಂಗ್ 5 ವರ್ಷಕ್ಕೆ ಹೆಚ್ಚಿಸಿ: ಪ್ರತಿ ವರ್ಷ ಸುಮಾರು ಅರ್ಧ ಮಿಲಿಯನ್‌ನಷ್ಟು ಎಂಜಿನಿಯರ್'ಗಳು ಕಾಲೇಜಿನಿಂದ ಹೊರ ಬರುತ್ತಿದ್ದಾರೆ. ಆದರೆ, ಅವರೆಲ್ಲರಿಗೂ ಸೂಕ್ತ ರೀತಿಯ ಉದ್ಯೋಗ ಅವಕಾಶಗಳು ಸಿಗುತ್ತಿಲ್ಲ. ಕೆಲ ಸಂದರ್ಭಗಳಲ್ಲಿ ಉದ್ಯೋಗ ಲಭ್ಯವಾದರೂ, ಕಾರ್ಯಕ್ಷಮತೆಯಿರುವುದಿಲ್ಲ. ಆದ್ದರಿಂದ ಈಗಿರುವ ನಾಲ್ಕು ವರ್ಷದ ಎಂಜಿನಿಯರಿಂಗ್ ಕೋರ್ಸ್'ನ್ನು ಐದು ವರ್ಷಕ್ಕೆ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು. ದೇಶಾದ್ಯಂತ ವಿಭಿನ್ನವಾದಂತಹ ಜನರಿದ್ದೂ, ಎಲ್ಲರಿಗೂ ಒಂದೇ ರೀತಿಯ ಶಿಕ್ಷಣ ನೀಡಲು ಕಷ್ಟ ಸಾಧ್ಯ. ಶೇ. 66ರಷ್ಟು ಗ್ರಾಮೀಣ ಭಾಗದ ಜನ ಭೂ ರಹಿತರಾಗಿದ್ದಾರೆ.
ಅವರು ತಮ್ಮ ಮಕ್ಕಳಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಕೊಡಿಸಲು ಸಾಧ್ಯವಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಪೋಷಕರು ಸಾಧ್ಯವಾದಷ್ಟು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಗಮನ ಹರಿಸಬೇಕು ಎಂದರು. ಪ್ರಸ್ತುತದ ಶಿಕ್ಷಣ ಪದ್ಧತಿಯಲ್ಲಿ ಮಕ್ಕಳು ಎಷ್ಟು ಪ್ರಮಾಣದಲ್ಲಿ ಜ್ಞಾನಾರ್ಜನೆ ಪಡೆದಿದ್ದಾರೆ ಎನ್ನುವುದಕ್ಕಿಂತ ಎಷ್ಟುಅಂಕ ಗಳಿಸಿದ್ದಾರೆ ಎಂಬ ಪ್ರಶ್ನೆಗಳು ಬರುತ್ತಿದೆ.
ಇದರಿಂದ ಯುವ ಸಮುದಾಯ ಅಂಕ ಗಳಿಸುವಲ್ಲಿ ತಲ್ಲೀನರಾಗಿದ್ದು, ಜ್ಞಾನಾರ್ಜನೆಯತ್ತ ಗಮನಿಸುತ್ತಿಲ್ಲ. ಪಠ್ಯದಲ್ಲಿ ಹೆಚ್ಚು ಅಂಕ ಗಳಿಸಿದವರು ಮಾತ್ರ ಬುದ್ದಿವಂತರು ಎನ್ನುವ ಸತ್ಯವಲ್ಲ. ಹೊರ ಜಗತ್ತಿನ ಅನುಭವವೇ ಹೆಚ್ಚು ಕಲಿಯಲು ಸಹಕಾರಿ ಎಂದರು. ಗೋಕುಲ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ. ಆರ್. ಜಯರಾಂ, ಗೋಕುಲ ಶಿಕ್ಷಣ ಪ್ರತಿಷ್ಠಾನ (ವೈದ್ಯಕೀಯ) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಡಿ.ವಿ. ಗುರುಪ್ರಸಾದ್, ರಾಮಯ್ಯ ಇಂಡಿಕ್ ಸ್ಪೆಷಾಲಿಟಿ ಆಯುರ್ವೇದ ರೆಸ್ಟೋರೇಷನ್ ಆಸ್ಪತ್ರೆ ನಿರ್ದೇಶಕ ಡಾ.ಜಿ.ಜಿ. ಗಂಗಾಧರನ್ ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.