
ನವದೆಹಲಿ(ಜೂ.30): ನೀವಿನ್ನೂ ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿಲ್ಲವಾ? ಸಮಯ ಸಿಗದೆ, ಹೆಸರು ಹಾಗೂ ದೂರವಾಣಿ ಸಂಖ್ಯೆ ಹೊಂದಾಣಿಕೆ ಇಲ್ಲದೇ ಜುಲೈ 1 ತಾರೀಖಿನ ಮೊದಲು ಲಿಂಕ್ ಮಾಡಲು ಅಸಾಧ್ಯವಾಗಿರಬಹುದು. ಚಿಂತಿಸಬೇಡಿ ಯಾಕೆಂದರೆ ಈ ಎರಡೂ ಕಾರ್ಡ್'ಗಳನ್ನು ಲಿಂಕ್ ಮಾಡುವ ಅವಧಿಯನ್ನು ವಿಸ್ತರಿಸಲಾಗಿದ್ದು, ಸದ್ಯ ನಿಮ್ಮ ಪಾನ್ ಕಾರ್ಡ್ ರದ್ದಾಗುವುದಿಲ್ಲ. ಇನ್ನು ಹೀಗಾಗಲು ಕಾರಣವೇನು ಅಂತೀರಾ? ಇಲ್ಲಿದೆ ವಿವರ
ವಾಸ್ತವವಾಗಿ ಪಾನ್ ರದ್ದು ಮಾಡುವ ಅಧಿಕಾರ ಸಿಬಿಡಿಟಿಗೆ ನೀಡಲಾಗಿತ್ತು. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ CBDT ಯ ಅಧ್ಯಕ್ಷ ಸುಶೀಲ್ ಕುಮಾರ್ 'ಯಾರೂ ಗಾಬರಿಗೊಳ್ಳಬೇಕಾದ ಅಗತ್ಯವಿಲ್ಲ. ಜೂನ್ 30ರ ಬಳಿಕ ಪಾನ್ ಕಾರ್ಡ್'ಗಳು ರದ್ದಾಗುವುದಿಲ್ಲ. ಇಲಾಖೆಯು ಕಾರ್ಡ್'ಗಳನ್ನು ಲಿಂಕ್ ಮಾಡಲು ಶೀಘ್ರದಲ್ಲೇ ಅಂತಿಮ ದಿನಾಂಕವನ್ನು ಪ್ರಕಟಿಸಲಿದೆ. ಇಲಾಖೆ ಘೋಷಿಸಿದ ದಿನಾಂಕದ ಬಳಿಕವೂ ಕಾರ್ಡ್'ಗಳು ಲಿಂಕ್ ಆಗದಿದ್ದರಷ್ಟೇ ಪಾನ್ ರದ್ದಾಗಲಿದೆ' ಎಂದಿದ್ದಾರೆ.
ಇದಕ್ಕೂ ಮುನ್ನ ಈ ವಿಚಾರವಾಗಿ ಅಧಿಸೂಚನೆ ಹೊರಡಿಸಿರುವ ಸರ್ಕಾರ ಜುಲೈ 1 ರಿಂದ ತೆರಿಗೆದಾರರು ತಮ್ಮ ಆಧಾರ್ ಕಾರ್ಡ್'ನ್ನು ಪಾನ್'ನೊಂದಿಗೆ ಕಡ್ಡಾಯವಾಗಿ ಲಿಂಕ್ ಮಾಡಬೇಕೆಂದಿತ್ತು. ತೆರಿಗೆ ನಿಯಮಗಳನ್ನು ಪರಿಷ್ಕೃತಗೊಳಿಸಿರುವ ಸರ್ಕಾರ ಪಾನ್''ಗಾಗಿ ಆವೇದನೆ ಮಾಡಿಕೊಳ್ಳುವ ಸಂದರ್ಭದಲ್ಲಿ 12 ಅಂಕೆಯ ಆಧಾರ್ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯ ಎಂದಿತ್ತು. ಈ ಘೋಷಣೆ ಮಾಡಿದ ವಿತ್ತ ಸಚಿವ ಅರುಣ್ ಜೇಟ್ಲಿ ನಕಲಿ ಪಾನ್ ಬಳಸಿ ವಂಚನೆ ನಡೆಸುವವರನ್ನು ತಡೆಯಲು ಈ ಕ್ರಮ ಕೈಗೊಳ್ಳುತ್ತಿರುವುದಾಗಿ ಸ್ಪಷ್ಟನೆ ನೀಡಿದ್ದರು.
ಈಗಾಗಲೇ 2.07 ಕೋಟಿ ಜನರು ಪಾನ್ ಹಾಗೂ ಆಧಾರ್ ಕಾರ್ಡ್'ಗಳನ್ನು ಲಿಂಕ್ ಮಾಡಿರುವುದಾಗಿ ಇಲಾಖೆ ತಿಳಿಸಿದೆ. ದೇಶದಲ್ಲಿ ಒಟ್ಟು 25 ಕೋಟಿ ಜನರು ಪಾನ್ ಕಾರ್ಡ್ ಹೊಂದಿದ್ದು, 111 ಕೋಟಿ ಜನ ಆಧಾರ್ ಕಾರ್ಡ್ ಹೊಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.