ದಾಂಡೇಲಿಯಲ್ಲಿ ವನ್ಯಜೀವಿ ರಕ್ಷಣಾ ಅಭಿಯಾನ

By Suvarna Web DeskFirst Published Jun 30, 2017, 12:20 PM IST
Highlights

ವನ್ಯಜೀವಿ ಸಂರಕ್ಷಣೆ ಮಾಡಲು ಜನತೆ, ಸಿಬ್ಬಂದಿಗೆ ಸ್ಫೂರ್ತಿ | ಕನ್ನಡಪ್ರಭ - ಸುವರ್ಣ ನ್ಯೂಸ್‌ ಸಹಯೋಗ | ನಟ ಪ್ರಕಾಶ್‌ ರೈ ನೇತೃತ್ವ

ಸುವರ್ಣ ನ್ಯೂಸ್‌, ಕನ್ನಡಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ ಜೋಯಿಡಾ ದಾಂಡೇಲಿಯಲ್ಲಿ ವನ್ಯಜೀವಿ ಸಂರಕ್ಷಣೆಯ ಬಗ್ಗೆ ಜನಜಾಗೃತಿ ಮೂಡಿಸಿತು. ಸ್ಥಳೀಯರು, ಅರಣ್ಯ ಇಲಾಖೆ ಸಿಬ್ಬಂದಿ, ಜನಪ್ರತಿನಿಧಿಗಳು ಉತ್ಸಾಹದಿಂದ ಪಾಲ್ಗೊಂಡರು. ಬುಧವಾರ ಹಾಗೂ ಗುರುವಾರ ನಡೆದ ಈ ಅಭಿಯಾನ ಯಶಸ್ವಿಯಾಯಿತಲ್ಲದೆ ವನ್ಯಜೀವಿ ಸಂರಕ್ಷಣೆಯಲ್ಲಿ ತೊಡಗಿಕೊಳ್ಳಲು ಜನತೆ ಹಾಗೂ ಇಲಾಖೆಯ ಸಿಬ್ಬಂದಿಯನ್ನು ಪ್ರೇರೇಪಿಸುವಲ್ಲಿ ಸಫಲವಾಯಿತು.

ಸಭೆ, ಸಮಾರಂಭ, ಸಂವಾದ, ಮಾತುಕತೆ, ಗ್ರಾಮೀಣ ಪ್ರದೇಶದ ವೀಕ್ಷಣೆ, ಅರಣ್ಯ ಇಲಾಖೆ ಸಿಬ್ಬಂದಿ, ಸ್ಥಳೀಯರ ಸಮಸ್ಯೆ ಆಲಿಸಿ ಅದಕ್ಕೊಂದು ಪರಿಹಾರ ಸೂತ್ರವನ್ನು ಹೆಣೆದು ವನ್ಯಜೀವಿ ರಕ್ಷಣೆಯ ಅಗತ್ಯತೆಯನ್ನು ಅಭಿಯಾನ ಯಶಸ್ವಿಯಾಗಿ ಪ್ರತಿಪಾದಿಸಿ ಸಂಚಲನ ಮೂಡಿಸಿತು.

ಆನೆ ಸಮಸ್ಯೆ ತಿಳಿಸಿದ ಗ್ರಾಮಸ್ಥರು: ಜೋಯಿಡಾ, ದಾಂಡೇಲಿ ಸುತ್ತಮುತ್ತ ಇರುವ ಕೆಲವು ಗ್ರಾಮಗಳಿಗೆ ತೆರಳಿ ಗ್ರಾಮೀಣ ಜನರೊಂದಿಗೆ ಮಾತುಕತೆ ನಡೆಸಲಾಯಿತು. ಮಾನವ ಪ್ರಾಣಿ ಸಂಘರ್ಷ ಹೆಚ್ಚಿರುವ ದಾಂಡೇಲಿ ಸಮೀಪದ ಕೇಗದಾಳ ಗ್ರಾಮಕ್ಕೆ ಗುರುವಾರ ವನ್ಯಜೀವಿ ಅಭಿಯಾನದ ತಂಡ ಭೇಟಿ ನೀಡಿದಾಗ ಗ್ರಾಮಸ್ಥರು ಸಮಸ್ಯೆಗಳ ಸರಮಾಲೆಯನ್ನೇ ಬಿಚ್ಚಿಟ್ಟರು. ಆನೆ ಹಾವಳಿಯಿಂದ ಜನತೆ ಎದುರಿಸುತ್ತಿರುವ ಸಮಸ್ಯೆಗಳನ್ನು ಪಟ್ಟಿಮಾಡಿದರು. ಆನೆಗಳು ಬರುವುದನ್ನು ವೀಕ್ಷಿಸಿ ಮುಂಜಾಗರೂಕತಾ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆ ವೀಕ್ಷಣಾ ಗೋಪುರಗಳನ್ನು ನಿರ್ಮಿಸಬೇಕೆಂದು ಬೇಡಿಕೆ ಮುಂದಿಟ್ಟರು. ಅಭಿಯಾನದ ರಾಯಭಾರಿ ಪ್ರಕಾಶ ರೈ ಸ್ಥಳದಲ್ಲಿದ್ದ ಇಲಾಖೆಯ ಉನ್ನತ ಅಧಿಕಾರಿಗಳ ಗಮನ ಸೆಳೆದಾಗ ಹಂತ ಹಂತವಾಗಿ ವೀಕ್ಷಣಾ ಗೋಪುರಗಳನ್ನು ನಿರ್ಮಿಸುವುದಾಗಿ ಹೇಳಿದರು.

ಅರಣ್ಯ ಸಿಬ್ಬಂದಿಯೊಂದಿಗೂ ಚರ್ಚೆ: ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳಷ್ಟೆಅಲ್ಲ, ಎಲ್ಲ ಹಂತದ ಸಿಬ್ಬಂದಿಯೊಂದಿಗೂ ಚರ್ಚೆ ನಡೆಸಲಾಯಿತು. ವನ್ಯಜೀವಿ ಸಂರಕ್ಷಣೆಯಲ್ಲಿ ಅವರು ಎದುರಿಸುತ್ತಿರುವ ಸವಾಲುಗಳು ಏನು? ಕಾರ್ಯಾಚರಣೆ ಹೇಗೆ ನಡೆಯುತ್ತಿದೆ? ಮಾನವ-ವನ್ಯಜೀವಿ ಸಂಘರ್ಷ ತಡೆಗಟ್ಟಲು ಕೈಗೊಂಡಿರುವ ಯೋಜನೆಗಳೇನು? ಎಂಬ ಬಗ್ಗೆ ವಿವರವಾಗಿ ಚರ್ಚೆ ನಡೆಸಲಾಯಿತು.

ಕನ್ನಡಪ್ರಭ - ಸುವರ್ಣ ನ್ಯೂಸ್‌ ವನ್ಯಜೀವಿ ಸಂರಕ್ಷಣಾ ಅಭಿಯಾನದ ರಾಯಭಾರಿ ಪ್ರಕಾಶ್‌ ರೈ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಹೇಗೆ ಕಂಡುಕೊಳ್ಳಬಹುದು ಎಂಬ ಬಗ್ಗೆ ಸಲಹೆ ನೀಡಿದರು. ಪ್ರಕಾಶ್‌ ರೈ ಜತೆಗೆ ಚಿತ್ರನಟಿ ಮೇಘನಾ ಗಾಂವಕರ, ಕನ್ನಡಪ್ರಭದ ಪುರವಣಿ ಸಂಪಾದಕ ಜೋಗಿ, ವಿನೋದಕುಮಾರ ನಾಯ್ಕ, ಪರಿಸರ ಬರಹಗಾರ, ಜಲ ತಜ್ಞ ಶಿವಾನಂದ ಕಳವೆ ಅಭಿಯಾನದುದ್ದಕ್ಕೂ ಪಾಲ್ಗೊಂಡಿದ್ದರು.

click me!