ಭಾರತ ವಿಮಾನಗಳಿಗೆ ಪಾಕ್ ವಾಯುಸೀಮೆ ಮುಕ್ತ ?

By Web DeskFirst Published May 13, 2019, 9:47 AM IST
Highlights

ವಾಯುದಾಳಿ ಬಳಿಕ ಭಾರತೀಯ ವಿಮಾನಗಳು, ತಮ್ಮ ವಾಯುಸೀಮೆ ಪ್ರವೇಶಿಸುವುದಕ್ಕೆ ನಿಷೇಧ ಹೇರಿದ್ದ ಪಾಕಿಸ್ತಾನ, ಈ ನಿರ್ಧಾರವನ್ನು ಮೇ 15ರಂದು ಪುನರ್‌ ಪರಿಶೀಲಿಸಲು ಮುಂದಾಗಿದೆ.

ಲಾಹೋರ್‌: ಬಾಲಾಕೋಟ್‌ ವಾಯುದಾಳಿ ಬಳಿಕ ಭಾರತೀಯ ವಿಮಾನಗಳು, ತಮ್ಮ ವಾಯುಸೀಮೆ ಪ್ರವೇಶಿಸುವುದಕ್ಕೆ ನಿಷೇಧ ಹೇರಿದ್ದ ಪಾಕಿಸ್ತಾನ, ಈ ನಿರ್ಧಾರವನ್ನು ಮೇ 15ರಂದು ಪುನರ್‌ ಪರಿಶೀಲಿಸಲಿದೆ ಎಂದು ನಾಗರಿಕ ವಾಯುಯಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಹಿರಿಯ ಸಚಿವರೊಬ್ಬರು ಪ್ರತಿಕ್ರಿಯಿಸಿ ಭಾರತದಲ್ಲಿ ಚುನಾವಣೆ ಮುಗಿಯುವ ತನಕ ಯಥಾಸ್ಥಿತಿ ಕಾಯ್ದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಭಾರತೀಯ ವಾಯುಪಡೆ ಫೆ.26ರಂದು ಬಾಲಾಕೋಟ್‌ನಲ್ಲಿರುವ ಉಗ್ರರ ಅಡಗು ತಾಣದ ಮೇಲೆ ದಾಳಿ ನಡೆಸಿತ್ತು. ಇದರಿಂದಾಗಿ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಉಲ್ಬಣಿಸಿತ್ತು. ಈ ಹಿನ್ನೆಲೆಯಲ್ಲಿ ವಿಮಾನಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಮಾಚ್‌ರ್‍ 27ರಂದು ನವದೆಹಲಿ, ಬ್ಯಾಂಕಾಕ್‌ ಮತ್ತು ಕೌಲಾಲಂಪುರ ಹೊರತು ಪಡಿಸಿ ಉಳಿದ ರಾಷ್ಟ್ರಗಳ ವಿಮಾನಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈಗ ಭಾರತೀಯ ವಿಮಾನಗಳ ಪ್ರವೇಶಕ್ಕೂ ಅವಕಾಶ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ ನಾಗರಿಕ ವಿಮಾನಯಾನ ಪ್ರಾಧಿಕಾರದ ವಕ್ತಾರ ಮುಜ್ತಾಬ್‌ ಬೈಗ್‌, ಭಾರತೀಯ ವಿಮಾನಗಳ ಮೇಲೆ ಹೇರಲಾಗಿದ್ದ ನಿಷೇಧವನ್ನು ತೆರವುಗೊಳಿಸುವ ಸಂಬಂಧ ಸರ್ಕಾರ ಮೇ 15ರಂದು ಸಭೆಯಲ್ಲಿ ನಿರ್ಧರಿಸಲಿದೆ. ಸಭೆಯಲ್ಲಿ ಅಧಿಕಾರಿಗಳು, ಸಚಿವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ಮೂಲಗಳ ಪ್ರಕಾರ ಭಾರತದಲ್ಲಿ ನಡೆಯುತ್ತಿರುವ ಚುನಾವಣೆ ಪ್ರಕ್ರಿಯೆ ಮುಗಿಯುವ ತನಕ ನಿಷೇಧ ತೆರವುಗೊಳಿಸುವ ಬಗ್ಗೆ ಪ್ರಧಾನಿ ಇಮ್ರಾನ್‌ ಖಾನ್‌ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್‌ ಚೌಧರಿ ಆಸಕ್ತಿ ಹೊಂದಿಲ್ಲ. ಯಥಾಸ್ಥಿತಿ ಕಾಪಾಡಿಕೊಂಡು ಹೋಗುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

click me!