ಕಾಶ್ಮೀರ ಗಡಿಗೆ ಇಮ್ರಾನ್‌, ಪಾಕ್‌ ಯುದ್ಧ ಸಿದ್ಧತೆ?

By Web Desk  |  First Published Sep 8, 2019, 10:12 AM IST

ಕಾಶ್ಮೀರ ಗಡಿಗೆ ಇಮ್ರಾನ್‌ ಪಾಕ್‌ ಯುದ್ಧ ಸಿದ್ಧತೆ?| ಸೇನಾ ಮುಖ್ಯಸ್ಥರ ಜತೆಗೂಡಿ ಭೇಟಿ| ಎಲ್‌ಒಸಿಗೆ ಪಾಕ್‌ ಪ್ರಧಾನಿ ಭೇಟಿ ಬಗ್ಗೆ ಕುತೂಹಲ


ಇಸ್ಲಾಮಾಬಾದ್‌[ಸೆ.08]: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದು ಬಳಿಕ ಭಾರತದ ವಿರುದ್ಧ ಹಲ್ಲು ಮಸೆಯುತ್ತಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌, ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನೆಲೆಸಿರುವ ಬೆನ್ನಲ್ಲೇ, ಸೇನಾ ಮುಖ್ಯಸ್ಥರ ಜೊತೆಗೂಡಿ ಗಡಿ ನಿಯಂತ್ರಣ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಗಡಿ ನಿಯಂತ್ರಣ ರೇಖೆಗೆ ಸಮೀಪದ ಪ್ರದೇಶದಲ್ಲೇ ಪಾಕಿಸ್ತಾನ ಭಾರೀ ಸೇನಾ ಜಮಾವಣೆ ಮಾಡಿದೆ ಎಂಬ ವರದಿಗಳ ಬೆನ್ನಲ್ಲೇ ಈ ಭೇಟಿ ನಡೆದಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ನಮ್ಮ ಕಾಶ್ಮೀರ(ಪಿಒಕೆ)ದಲ್ಲಿ ಭಾರತ ಮಿಲಿಟರಿ ಕಾರ್ಯಾಚರಣೆಗೆ ಮುಂದಾದರೆ, ಅಂಥ ಪರಿಸ್ಥಿತಿಯನ್ನು ಎದುರಿಸಲು ತಮ್ಮ ಸೇನೆಯು ಸರ್ವಸನ್ನದ್ಧವಾಗಿದೆ ಎಂದು ಇತ್ತೀಚೆಗಷ್ಟೇ ಇಮ್ರಾನ್‌ ಖಾನ್‌ ಹೇಳಿದ್ದರು. ಅದರ ಬೆನ್ನಲ್ಲೇ ಖಾನ್‌ ಗಡಿ ಭೇಟಿ, ಪಾಕಿಸ್ತಾನ ಭಾರತದ ವಿರುದ್ಧ ಯುದ್ಧಕ್ಕೆ ಸಿದ್ಧತೆ ನಡೆಸುತ್ತಿದೆಯೇ ಎಂಬ ಅನುಮಾನಗಳನ್ನು ಹುಟ್ಟುಹಾಕಿದೆ.

Latest Videos

ಪಾಕಿಸ್ತಾನದ ರಕ್ಷಣಾ ಹಾಗೂ ಹುತಾತ್ಮರ ದಿನಾಚರಣೆ ಪ್ರಯುಕ್ತ ಶುಕ್ರವಾರ ಪ್ರಧಾನಿ ಖಾನ್‌ ಗಡಿ ನಿಯಂತ್ರಣ ಪ್ರದೇಶಕ್ಕೆ ಭೇಟಿ ನೀಡಿದ್ದು, ಈ ವೇಳೆ ಗಡಿ ನಿಯಂತ್ರಣ ಪ್ರದೇಶಗಳ ವಾಸ್ತವ ಸ್ಥಿತಿ ಬಗ್ಗೆ ಅವಲೋಕನ ನಡೆಸಿದ್ದಾರೆ. ಅಲ್ಲದೆ, ಸೇನಾ ಯೋಧರು ಹಾಗೂ ಹುತಾತ್ಮರ ಯೋಧರ ಕುಟುಂಬಸ್ಥರೊಂದಿಗೆ ಮಾತನಾಡಿ ಅವರಿಗೆ ಸಾಂತ್ವನ ಹೇಳಿದರು .ಈ ವೇಳೆ ಅವರೊಂದಿಗೆ ಪಾಕ್‌ ಸೇನಾ ಮುಖ್ಯಸ್ಥ ಖ್ವಾಮರ್‌ ಜಾವೇದ್‌ ಬಾಜ್ವಾ, ರಕ್ಷಣಾ ಸಚಿವ ಪರ್ವೇಜ್‌ ಖಟ್ಟಾಕ್‌, ವಿದೇಶಾಂಗ ಸಚಿವ ಶಾ ಮೊಹಮ್ಮದ್‌ ಖುರೇಷಿ ಹಾಗೂ ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದ ವಿಶೇಷ ಸಮಿತಿಯ ಅಧ್ಯಕ್ಷ ಸೈಯದ್‌ ಫಖರ್‌ ಇಮ್ರಾನ್‌ ಜೊತೆಗಿದ್ದರು ಎಂದು ತಿಳಿದುಬಂದಿದೆ.

click me!