ತೆಲಂಗಾಣ ದೇವಸ್ಥಾನದ ಕಂಬದ ಮೇಲೆ ಕೆಸಿಆರ್‌ ಚಿತ್ರ ಕೆತ್ತನೆ: ವಿವಾದ

By Web DeskFirst Published Sep 8, 2019, 9:26 AM IST
Highlights

ಯಾದಾದ್ರಿ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯವನ್ನು ಸರ್ಕಾರ 1800 ಕೋಟಿ ರು. ವೆಚ್ಚದಲ್ಲಿ ಮರು ನಿರ್ಮಾಣ| ಯಾದಾದ್ರಿ ದೇವಾಲಯದ ಕಂಬದ ಮೇಲೆ ಕೆಸಿಆರ್‌ ಭಾವಚಿತ್ರ ಕೆತ್ತನೆ: ವಿವಾದ| 

ಹೈದರಾಬಾದ್‌[ಸೆ.08]: ತೆಲಂಗಾಣದ ಪ್ರಸಿದ್ಧ ಯಾದಾದ್ರಿ ದೇವಾಲಯದ ಕಂಬಗಳ ಮೇಲೆ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ಭಾವಚಿತ್ರ ಹಾಗೂ ತೆಲಂಗಾಣ ರಾಷ್ಟ್ರ ಸಮಿತಿಯ ಚಿಹ್ನೆಯಾದ ಕಾರಿನ ಚಿತ್ರವನ್ನು ಕೆತ್ತಿರುವುದು ಭಾರೀ ವಿವಾದ ಹುಟ್ಟುಹಾಕಿದೆ.

ಯಾದಾದ್ರಿ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯವನ್ನು ಸರ್ಕಾರ 1800 ಕೋಟಿ ರು. ವೆಚ್ಚದಲ್ಲಿ ಮರು ನಿರ್ಮಾಣ ಮಾಡುತ್ತಿದೆ. ಈ ಕಾರಣಕ್ಕೆ ಮೆಚ್ಚುಗೆ ಸೂಚಕವಾಗಿ ಕಂಬದ ಮೇಲೆ ಕೆ.ಸಿ.ಆರ್‌. ಭಾವಿಚಿತ್ರವನ್ನು ಕೆತ್ತಲಾಗಿದೆ. ಈ ಕುರಿತಾಗಿ ಸರ್ಕಾರ ಯಾವುದೇ ಆದೇಶ ಹೊರಡಿಸಿಲ್ಲ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಅದೇ ರೀತಿ ಸರ್ಕಾರದ ಜನಪ್ರಿಯ ಯೋಜನೆಗಳಾದ ಹರಿಥ ಹರಂ, ಶಾದಿ ಮುಬಾರಕ್‌ ಮುತ್ತಿತರ ಯೋಜನೆಗಳ ಚಿತ್ರವನ್ನೂ ಕೆತ್ತಲಾಗಿದೆ. ಅಲ್ಲದೇ ದೇವಾಲಯದಲ್ಲಿ ಮಹಾತ್ಮ ಗಾಂಧಿ, ಜವಾಹರಲಾಲ್‌ ನೆಹರು, ಇಂದಿರಾ ಗಾಂಧಿ ಅವರ ಚಿತ್ರಗಳನ್ನು ಕೂಡ ಕಾಣಬಹುದಾಗಿದೆ. ದೇವಾಲಯದ ಕಂಬಗಳ ಮೇಲೆ ಈ ರೀತಿಯ 3,000ಕ್ಕೂ ಹೆಚ್ಚು ಚಿತ್ರಗಳನ್ನು ಕೆತ್ತಲಾಗಿದೆ.

ಇದೇ ವೇಳೆ ದೇವಾಲಯದ ಕಂಬದ ಮೇಲೆ ಕೆ.ಸಿ.ಆರ್‌. ಅವರ ಚಿತ್ರವನ್ನು ಕೆತ್ತಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಕೆ.ಸಿ.ಆರ್‌ ತಮ್ಮನ್ನು ದೇವರಂತೆ ಬಿಂಬಿಸಿಕೊಳ್ಳಲು ಹೊರಟಿದ್ದಾರೆ. ಇದೊಂದು ನಾಚಿಕೆಗೇಡಿನ ಸಂಗತಿ ಎಂದು ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷಗಳು ಟೀಕಿಸಿವೆ. ದೇವಾಲಯದ ಹೊರಗೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

click me!